ಬೆಂಗಳೂರು: ಮಾನಸಿಕ ಆರೋಗ್ಯ ಅತ್ಯಗತ್ಯವಾಗಿದ್ದು, ಆಧುನಿಕ ಕಾಲಟ್ಟದ ಜನರು ಅನೇಕ ಕಾರಣಗಳಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಂ. ಜಯಕರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿವಿ ಮನೋವಿಜ್ಞಾನ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ 'ಅನ್ವಯಿಕ ಮನೋವಿಜ್ಞಾನ' ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧೀಶಿಲ ರಾಷ್ಟ್ರಗಳ ಜನರು ಖಿನ್ನತೆ, ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲೂ ಈ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಅತ್ಯಗತ್ಯ. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿ ಆಧಾರಿಸಿ ಬೋಧಿಸುವ ಪ್ರವೃತ್ತಿ ಹೆಚ್ಚಾಗಬೇಕು. ಆಯುರ್ವೇದ, ಹೋಮಿಯೋಪಥಿ, ಯುನಾನಿ ಆರೋಗ್ಯ ಪದ್ಧತಿಗಳ ಸಾಲಿಗೆ ಈಗ ಮನೋವಿಜ್ಞಾನವೂ ಸೇರಿದೆ. ಮನೋವಿಜ್ಞಾನ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗುತ್ತಿದ್ದು, ಈ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆ, ಅಧ್ಯಯನಗಳು ನಡೆಯಬೇಕು ಎಂದು ತಿಳಿಸಿದರು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ. ಶ್ರೀನಿವಾಸ್, ಕುಲಸಚಿವ ಶೇಕ್ ಲತೀಫ್, ಡಾ. ಶ್ರೀನಾಥ್ ಮಲ್ಲಿಕಾರ್ಜುನ ಮದ್ದೂರು, ಡಾ.ಸೌಮ್ಯಶ್ರೀ ಇತರರಿದ್ದರು.