ಜಿಲ್ಲೆ

3 ತಿಂಗಳು ಮನೆಯಲ್ಲಿ ಕೂತಿದ್ರೂ ಸಂಬಳ ಕೊಟ್ಟಿದ್ದಾರೆ, ಆ ನಿಯತ್ತು ಇದ್ದರೆ ನಾವು ಸೇವೆ ಮಾಡಬೇಕು: ಬಸ್ ಚಾಲಕ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವ ನಡುವೆಯೇ ಮಹಾಮಾರಿ ಕರೊನಾ ವೈರಸ್​ ಸಂಕಷ್ಟದಲ್ಲಿ ಮುಷ್ಕರ ಸರಿಯಲ್ಲ ಎಂದು ಸಾರಿಗೆ ನೌಕರರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.

ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಮೂರು ತಿಂಗಳು ಮನೆಯಲ್ಲಿ ಕುಳಿತಿದ್ದರೂ ನಮಗೆ ಸಂಬಳ ನೀಡಿದ್ದಾರೆ. ನಿಯತ್ತು ಅಥವಾ ಮನಃಸಾಕ್ಷಿ ಇದ್ದವರು ಸೇವೆ ಮಾಡಬೇಕು ಎಂದಿರುವ ಬಿಎಂಟಿಸಿ ಬಸ್​ ಚಾಲಕ, ಸೇವೆಗೆ ಹಾಜರಾಗುವ ಮೂಲಕ ಕರ್ತವ್ಯ ನಿಷ್ಠೆ ಮರೆದಿದ್ದಾರೆ.

ಕರೊನಾ ಸಂಕಷ್ಟ ಸಮಯದಲ್ಲಿ ದುಡ್ಡೇ ಇಲ್ಲ ಅಂದಾಗ ಎಲ್ಲಿಂದ ಕೊಡುತ್ತಾರೆ. ಮೂರು ತಿಂಗಳು ನೀವು ಮನೆಯಲ್ಲಿದ್ದಾಗ ಈ ಸಂಸ್ಥೆ ನಿಮ್ಮ ಸಂಸಾರವನ್ನು ಸಾಕಿದೆ. ಈ ಋಣಕ್ಕಾದರೂ ಬಂದು ಸೇವೆ ಸಲ್ಲಿಸಿ ಎಂದರು.

ಮುಷ್ಕರದ ದಿನ ಬಸ್​ ಓಡಿಸಿದವರಿಗೆ ಚಪ್ಪಲಿ ಹಾರ ಹಾಕುವ ವಿಚಾರವಾಗಿ ಮಾತನಾಡಿ, ನನ್ನ ಹೆಸರು ತ್ಯಾಗರಾಜು, ನಾನೇ ಆಹ್ವಾನ ಮಾಡುತ್ತಿದ್ದೇನೆ. ಖಂಡಿತವಾಗಿ ಹಾರ ಹಾಕಬಹುದು. ನಾನು ಸಾರ್ವಜನಿಕ ಸೇವೆಗೆಂದು ಬಂದಿದ್ದೇನೆ. ಅದಕ್ಕಾಗಿ ಚಪ್ಪಲಿ ಹಾರ ಹಾಕಿಸಿಕೊಳ್ಳುವುದಕ್ಕೂ ನಾನು ರೆಡಿ ಎಂದು ತ್ಯಾಗರಾಜು ಅವರು ಸವಾಲು ಹಾಕಿದರು.