ಜಿಲ್ಲೆ

ವಿಸ್ತರಿತ ಮಾರ್ಗದಲ್ಲಿ ಸುರಕ್ಷತಾ ಪರೀಕ್ಷೆ; ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರು: ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಟ್ಟ ವಿಸ್ತರಿತ ಮಾರ್ಗದ ಮೆಟ್ರೋ ನಿಲ್ದಾಣಗಳ ನಡುವೆ ಸುರತಾ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಆ.27 (ಭಾನುವಾರ)ರಂದು ನೇರಳ ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣ, ಬೈಯಪ್ಪನಹಳ್ಳಿ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ, ವೈಟ್​ಫೀಲ್ಡ್​ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಮ.1 ಗಂಟೆ ವರೆಗೆ ಮೆಟ್ರೋ ರೈಲು ಸೇವೆಗಳು ಇರುವುದಿಲ್ಲ. ಆದರೆ ಬೆ. 7 ಗಂಟೆಯಿಂದ ಮ.1ರ ವರೆಗೆ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆಗಳು ಲಭ್ಯವಿರಲಿದೆ.

ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಮತ್ತು ಕೃಷ್ಣರಾಜಪುರದಿಂದ ವೈಟ್​ಫೀಲ್ಡ್​ (ಕಾಡುಗೋಡಿ) ಮೆಟ್ರೋ ನಿಲ್ದಾಣದವರೆಗೆ ಮ.1 ಗಂಟೆಯ ನಂತರ ರಾ.11ರ ವರೆಗೆ ಎಂದಿನಂತೆ ಮೆಟ್ರೋ ರೈಲು ಸಂಚಾರ ಇರಲಿದೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್​ಸಿಎಲ್​ ಸ್ಪಷ್ಟಪಡಿಸಿದೆ.