ಜಿಲ್ಲೆ

ಹಸಿದವರ ಹೊಟ್ಟೆ ತುಂಬಿಸಲು ಹೋಗಿ ಪ್ರಾಣತೆತ್ತ ಯುವಕರು‌: ಎದೆ ಝಲ್​ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸರೆ!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹಿಟ್​ ಆ್ಯಂಡ್​ ರನ್​ಗೆ ಯುವಕರಿಬ್ಬರು ಬಲಿಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯ ನೋಡಿದ್ರೆ ಎಂಥವರ ಎದೆಯು ಒಂದು ಕ್ಷಣ ಝಲ್ ಎನ್ನುವಂತಿದೆ.

ಗೌತಮ್ ಮತ್ತು ಶ್ರೀಕಾಂತ ಮೃತ ಯುವಕರು. ಇವರು ಮಂಜುನಾಥ್​ ನಗರದ ನಿವಾಸಿಗಳು. ಸ್ವಿಗ್ಗಿ ಡೆಲಿವರಿ ಬಾಯ್​​ಗಳಾಗಿ ಕೆಲಸ ಮಾಡುತ್ತಿದ್ದರು. ನಗರದ ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿನ್ನೆ (ಮಂಗಳವಾರ) ತಡರಾತ್ರಿ ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್​ನಲ್ಲಿ ಊಟ ಡೆಲಿವರಿ ಕೊಡಲು ಹೋಗಿದ್ದರು.

ಡೆಲಿವರಿ ಕೊಟ್ಟು ವಾಪಸ್ ಬೈಕ್ ಮೇಲೆ ಬಂದು ಕುಳಿತಿದ್ದರು. ಬಳಿಕ ಅಲ್ಲಿಂದ ಹೊರಟ ಕೆಲವೇ ಸೆಕೆಂಡ್​ಗಳಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಕಾರು ನೋಡು ನೋಡುತ್ತಿದ್ದಂತೆ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿ ಬಿದ್ದ ಯುವಕರಿಬ್ಬರ ಪ್ರಾಣವು ಸಹ ಹಾರಿ ಹೋಗಿದೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್​ ಎನಿಸುವಂತಿದೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ