ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಸಾಧಾರಣವಾಗಿ ಸುರಿಯುತ್ತಿರುವ ಮಳೆ ಮುಂದಿನ ಎರಡು ದಿನ ಮುಂದುವರಿಯಲಿದೆ.
ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ರೂಪುಗೊಂಡಿರುವ ಮಾರುತಗಳು ಶ್ರೀಲಂಕಾ ತೀರವನ್ನು ದಾಟಿ ಪಶ್ಚಿಮ ನೈಋತ್ಯ ದಿಕ್ಕಿನತ್ತ ಭಾನುವಾರ ಚಲಿಸಿವೆ. ಸೋಮವಾರ ಅರಬ್ಬಿ ಸಮುದ್ರದ ಅಗ್ನೇಯ ಭಾಗದತ್ತ ಮಾರುತಗಳು ಹಾದು ಹೋಗಲಿವೆ. ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ.
ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಹಾಸನ, ಮೈಸೂರು ಮತ್ತು ರಾಮನಗರದಲ್ಲಿ ಡಿ.27 ಮತ್ತು 28ರಂದು ಸಾಧಾರಣ ಮಳೆ ಬೀಳಲಿದೆ. ಈ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.