ಜಿಲ್ಲೆ

23ರಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ : 1 ಕೋಟಿ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ಲೋಕಾರ್ಪಣೆ

ಬೆಳ್ತಂಗಡಿ: 1974-75ರಲ್ಲಿ ಅಂದಿನ ಸಮಾಜ ಚಿಂತಕ ಬಿ.ಕೆ ಸೂರ್ಯನಾರಾಯಣ ಅಧ್ಯಕ್ಷರಾಗಿ, ನೇಮಿರಾಜ್ ಶೆಟ್ಟಿ ಕಾರ್ಯದರ್ಶಿಯಾಗಿ ಹಾಗೂ ಮುಹಮ್ಮದ್ ಶರೀಫ್ ಕೋಶಾಧಿಕಾರಿಯಾಗಿ ಆರಂಭಗೊಂಡ ಬೆಳ್ತಂಗಡಿ ಲಯನ್ಸ್ ಕ್ಲಬ್ 50 ಸಂವತ್ಸರ ಪೂರೈಸಿದ್ದು ಜೂನ್ 23ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಉಮೇಶ್ ಶೆಟ್ಟಿ ಹೇಳಿದರು.

ಬುಧವಾರ ಬೆಳ್ತಂಗಡಿ ಲಯನ್ಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಯನ್ಸ್ 50 ವರ್ಷದ ಪಯಣದಲ್ಲಿ ಅನೇಕ ಜನಪರ ಯೋಜನೆಗಳನ್ನು ಸಮಾಜಕ್ಕೆ ಸಮರ್ಪಿಸಿದೆ. ಸುವರ್ಣ ಮಹೋತ್ಸವ ವರ್ಷವಾದ ಈ ಅವಧಿಯಲ್ಲೇ 500 ಸೇವಾ ಚಟುವಟಿಕೆ ಗುರಿ ಪೂರೈಸಲಾಗಿದೆ. 4 ಅರ್ಹ ಕುಟುಂಬಕ್ಕೆ ಗೃಹ ನಿರ್ಮಾಣ, 4 ಪ್ರಯಾಣಿಕರ ತಂಗುದಾಣಗಳ ಸಮರ್ಪಣೆ, ಲಯನ್ಸ್ ಸದಸ್ಯರ ಮನೆ ಭೇಟಿ ಹಾಗೂ ಸೇವಾ ಚಟುವಟಿಕೆ ನಡೆಸಲಾಗಿದೆ. ಬೆಳ್ತಂಗಡಿ ಕ್ಯಾಂಪ್ಕೋ ರಸ್ತೆಯಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಮೂಲಕ ಸ್ಥಾಪಿಸಲಾಗಿದ್ದ ಲಯನ್ಸ್ ಸೇವಾ ಭವನವನ್ನು ಅಂದಾಜು 1 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಮರು ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತ ತಲುಪುತ್ತಿದೆ. ರಾಜು ಶೆಟ್ಟಿ ಬೆಂಗೆತ್ಯಾರು ಅವರ ಅಧ್ಯಕ್ಷತೆಯಲ್ಲಿರುವ ಕಟ್ಟಡ ನಿರ್ಮಾಣ ಸಮಿತಿ ಉದ್ದೇಶ ಈಡೇರಿಕೆಗಾಗಿ ಪ್ರಯತ್ನಿಸುತ್ತಿದೆ ಎಂದರು.

ಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ, ತುಕಾರಾಮ್, ವಸಂತ ಶೆಟ್ಟಿ, ಲಯನ್ಸ್ ಕ್ಲಬ್ ಮಾಧ್ಯಮ ಕಾರ್ಯದರ್ಶಿ ಅಶ್ರಫ್ ಆಲಿಕುಂಞ ಮುಂಡಾಜೆ ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷರಿಗೆ ಸನ್ಮಾನ

ಸುವರ್ಣ ಮಹೋತ್ಸವ ಪ್ರಯುಕ್ತ ಜೂನ್ 23ರಂದು ಸಂಜೆ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮ, ಚಿಣ್ಣರ ಚಿಲಿಪಿಲಿ, ಹಾಡಿನ ಝೇಂಕಾರ, ಸುವರ್ಣ ಮಹೋತ್ಸವ ಭವ್ಯ ಸಮಾರಂಭ, ಸಾಧಕರಿಗೆ ಸನ್ಮಾನ, ಪೂರ್ವಾಧ್ಯಕ್ಷರಿಗೆ ಸನ್ಮಾನ, ದೇವದಾಸ್ ಕಾಪಿಕಾಡ್ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ. ಉಮೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜಾ, ಶಾಸಕ ಹರೀಶ್ ಪೂಂಜ, ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಮತ್ತು ಹರೀಶ್ ಕುಮಾರ್, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ನಟ ಪಟ್ರೆ ನಾಗರಾಜ್ ಬೆಂಗಳೂರು ಭಾಗವಹಿಸಲಿದ್ದಾರೆ.