ಬಳ್ಳಾರಿ: ಕರೊನಾ ಸೋಂಕು ದಿನದಿಂದ ದಿನಕ್ಕೆ ಹೊಸ ಹೊಸ ಅವತಾರಗಳನ್ನು ತೋರುತ್ತಲಿದೆ. ಕರೊನಾ ಲಕ್ಷಣ ಇಲ್ಲದವರಲ್ಲಿಯೂ ಕರೊನಾ ಪಾಸಿಟಿವ್ ಇರುವುದು ಈಗ ಮಾಮೂಲಿ ಆಗಿರುವ ನಡುವೆಯೇ, ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಹೋಗಿರುವ ಕಾನ್ಸ್‌ಟೆಬಲ್ ಒಬ್ಬರು ವಾರದ ನಂತರ ಮೃತಪಟ್ಟಿದ್ದು, ಇದು ಆರೋಗ್ಯ ಇಲಾಖೆಯ ಹುಬ್ಬೇರಿಸುವಂತೆ ಮಾಡಿದೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಹೆಡ್ ಕಾನ್ಸ್‌ಟೆಬಲ್ 44 ವರ್ಷದ ಗೌರಿಹಳ್ಳಿ ರವಿ (44) ಇಂದು ಮುಂಜಾನೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಮೃತಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಇವರು ಕರೊನಾ ಸೋಂಕಿನಿಂದ ಬಳಲುತ್ತಿದ್ದರು. 14 ದಿನಗಳವರೆಗೆ ಸೋಂಕಿಗೆ ಚಿಕಿತ್ಸೆ ಪಡೆದು ಕಳೆದ ವಾರ ಅಂದರೆ ಏಳು ದಿನಗಳ ಹಿಂದೆ ಮನೆಗೆ ವಾಪಸಾಗಿದ್ದಾರೆ.
.ಇದಾದ ಬಳಿಕ ಮನೆಯಲ್ಲಿ ಇದ್ದ ರವಿ ಹೋಂ ಕ್ವಾರೆಂಟೈನ್ ಆಗಿದ್ದರು. ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಅವರನ್ನು ಮತ್ತೆ ಪರೀಕ್ಷೆ ಮಾಡಿದಾಗಲೂ ಸೋಂಕು ಇರಲಿಲ್ಲ. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ 7 ದಿನಗಳ ಬಳಿಕ ಮತ್ತೆ ರವಿ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಮೃತಪಟ್ಟಿದ್ದಾರೆ.
ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದಿದೆ ಆರೋಗ್ಯ ಇಲಾಖೆ. ಗುಣಮುಖ ಆದ ಬಳಿಕವೂ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.
ಈಗ ಆರೋಗ್ಯದ ಇಲಾಖೆ ರವಿ ಶವದ ಸ್ವಾಬ್ ಟೆಸ್ಟ್ ಕಲೆಕ್ಟ್ ಮಾಡಿದ್ದು, ಮತ್ತೊಂದು ಬಾರಿ ಕರೊನಾ ಪರೀಕ್ಷೆ ಮಾಡಲು ಮುಂದಾಗಿದೆ.