ಬೆಳಗಾವಿ: ಕೆಲವೊಮ್ಮೆ ಮೂಢನಂಬಿಕೆಗಳು ಸಹ ವರವಾಗುತ್ತವೆ ಎಂಬುದಕ್ಕೆ ರಾಯಭಾಗ ತಾಲೂಕಿನ ಗ್ರಾಮವೊಂದು ಸಾಕ್ಷಿಯಾಗಿದೆ. ಹಾಗಾಂತ ಮೂಢನಂಬಿಕೆಗೆ ಅಂಟಿಕೊಳ್ಳುವುದು ಕೂಡ ಒಳ್ಳೆಯದಲ್ಲ ಎಂಬುದನ್ನು ಮರೆಯಬಾರದು.
ಕರೊನಾ ವೈರಸ್ನಂತಹ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಮೂಢನಂಬಿಕೆ ಸರಿಯಾಗಿ ಉಪಯೋಗಕ್ಕೆ ಬಂದಿದೆ. ದೇವರು ಹೇಳಿದ್ದಾನೆ ಎಂದು ಊರಿಗೂರೇ ಬಂದ್ ಮಾಡಿದ್ದರಿಂದ ಗ್ರಾಮಸ್ಥರಿಗೆ ಅದರಿಂದ ಲಾಭವೂ ಆಗಿದೆ.
ಹೌದು, ನಾವು ಹೇಳ ಹೊರಟಿರುವುದು ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದ ಕತೆ. 3 ಸೋಮವಾರ ಮತ್ತು 2 ಶುಕ್ರವಾರ ಇಡೀ ಗ್ರಾಮವನ್ನೇ ಬಂದ್ ಮಾಡಿ ನಮ್ಮೂರಿಗೆ ಕರೊನಾ ಬರುವುದಿಲ್ಲ ಎಂದು ಊರಿನ ಆರಾಧ್ಯ ದೈವ ಹಾಲಸಿದ್ದ ನುಡಿದಿದ್ದನಂತೆ. ಹೀಗಾಗಿ ಇಡೀ ಊರನ್ನೇ ಗ್ರಾಮಸ್ಥರು ಬಂದ್ ಮಾಡಿದ್ದರು.
ಯಾವುದೇ ಅಂಗಡಿ ವಹಿವಾಟು ನಡೆಸದೆ ಸಂಪೂರ್ಣ ಗ್ರಾಮವನ್ನೇ ಮುಚ್ಚಿ ಹಾಲಸಿದ್ದ ದೇವರ ಮಾತನ್ನು ಕಟ್ಟುನಿಟ್ಟಿನಲ್ಲಿ ಪಾಲಿದ್ದರು. ಇದೀಗ ನಮ್ಮೂರಿಗೆ ಕರೊನಾ ಕಾಲಿಡದಿರಲು ಅದೇ ಕಾರಣ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಮೂಢನಂಬಿಕೆಯೇ ಇರಬಹುದು, ಆದರೆ ಜನರಿಗೆ ನೆರವಾಗಿದಂತೂ ನಿಜ. ಆದರೆ, ಎಲ್ಲ ವಿಚಾರದಲ್ಲೂ ಮೂಢನಂಬಿಕೆಗೆ ಅಂಟಿ ಕೂರುವುದು ಸರಿಯಲ್ಲ. (ದಿಗ್ವಿಜಯ ನ್ಯೂಸ್)