

ಚಾಮರಾಜನಗರ: ರಾಜ್ಯಾದ್ಯಂತ ಇಂದು ಹೊರ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಿಂದ ಮಾತ್ರ ಇಂದು ಹೊರ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಿಲ್ಲ. ಹಾಗಾಗಿ ಹೊರಜಿಲ್ಲೆಗಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದ ನೂರಾರು ಪ್ರಯಾಣಿಕರು ನಿರಾಶರಾಗಿ ವಾಪಸ್ ಹೋಗುವಂತಾಯ್ತು.
ಜಿಲ್ಲೆಯ ಒಳಗೆ ಮಾತ್ರ ಬಸ್ ಸಂಚಾರ ಮೇ 4 ರಿಂದಲೇ ಪ್ರಾರಂಭಿಸಲಾಗಿದೆ. ಹೊರ ಜಿಲ್ಲೆಗಳಿಗೆ ಬಸ್ ಬಿಡುವ ಬಗ್ಗೆ ಜಿಲ್ಲಾಡಳಿತ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಈ ಮಾಹಿತಿ ತಿಳಿಯದೆ ನೂರಾರು ಪ್ರಯಾಣಿಕರು ಬಂದು ಗಂಟೆಗಟ್ಟಲೇ ಕಾದು ನಿರಾಶರಾಗಿ ವಾಪಸ್ ತೆರಳಿದರು.
ಪಕ್ಕದ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಮೃತಪಟ್ಟ ತಮ್ಮ ಸಹೋದರನ ಪುತ್ರನ ಶವಸಂಸ್ಕಾರಕ್ಕೆ ತೆರಳಲು ಬಂದು ಮಹಿಳೆಯೊಬ್ಬರು ಬಸ್ ಸಂಚಾರ ಇಲ್ಲದಿರುವುದರಿಂದ ಕಣ್ಣೀರು ಹಾಕುತ್ತಾ ವಾಪಸ್ ಹೋದ ಘಟನೆ ಮನಕಲಕುವಂತಿತ್ತು.