More

  ಶ್ರೀಭಗೀರಥರ ತತ್ವ ಚಿಂತನೆಗಳನ್ನು ಅಳವಡಿಸಿಕೊಳ್ಳಿ

  ಚಾಮರಾಜನಗರ: ಎಲ್ಲಾ ಸಮುದಾಯಗಳಲ್ಲಿ ಇರುವ ಸಮಸ್ಯೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಶ್ರೀಭಗೀರಥ ಮಹರ್ಷಿ ತತ್ವ-ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಕರೆನೀಡಿದರು.

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ನಮ್ಮ ದೇಶಕ್ಕೆ 5 ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಈವರೆಗೂ ಸಾವಿರಾರು ಮಹಾಪುರುಷರು ಸಾಮಾಜವನ್ನು ತಿದ್ದುವ ಕೆಲಸಮಾಡಿದ್ದಾರೆ. ಆ ಸಾಲಿನಲ್ಲಿ ಶ್ರೀಭಗೀರಥ ಮಹರ್ಷಿಯವರು ಸೇರುತ್ತಾರೆ. ಎಲ್ಲಾ ಸಮುದಾಯಗಳಲ್ಲೂ ಒಂದಿಲ್ಲೊಂದು ಸಮಸ್ಯೆ ಇರುತ್ತದೆ. ಅದೇ ರೀತಿಯಲ್ಲಿ ಉಪ್ಪಾರ ಸಮುದಾಯ ಶಿಕ್ಷಣದಲ್ಲಿ ಹಿಂದುಳಿದಿರುವುದು ಕಾಣುತ್ತಿದೆ. ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದರು.

  ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ನಮ್ಮ ಶ್ರೀಮಂತ ಪರಂಪರೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳಿಗೆ ತನ್ನದೇ ಆದ ಮಹತ್ವವಿದೆ. ಅನೇಕ ದಾರ್ಶನಿಕರು, ಮಹಾಪುರುಷರು, ಮಹರ್ಷಿಗಳ ಹೆಸರು ಅದರಲ್ಲಿ ದಾಖಲಾಗಿದೆ. ಅದರಲ್ಲಿ ಶ್ರೀ ಭಗೀರಥ ಮಹರ್ಷಿಗಳು ಕೂಡ ಶ್ರೇಷ್ಠ ಮಹರ್ಷಿಯಾಗಿದ್ದಾರೆ. ತನ್ನ ಪೂರ್ವಜರ ಮುಕ್ತಿಗಾಗಿ ದೇವಗಂಗೆಯನ್ನೇ ಧರೆಗೆ ತಂದರು. ಈ ನಿಟ್ಟಿನಲ್ಲಿ ಶ್ರೀಭಗೀರಥ ಮಹರ್ಷಿ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಾಗಬೇಕಿದೆ ಎಂದರು.

  ಶಿಕ್ಷಕ ಗೋವಿಂದರಾಜು ಮಾತನಾಡಿ, ಶ್ರೀಭಗೀರಥರ ವಂಶಸ್ಥರು ಎಂದು ಕರೆಸಿಕೊಳ್ಳುವ ಉಪ್ಪಾರರು ಉಪ್ಪು ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಹೊಂದಿದ್ದರು. ಉಪ್ಪಾರರ ಮೂಲವನ್ನು ನೋಡಿದರೆ ರಘುವಂಶಕ್ಕೂ, ಉಪ್ಪಾರರಿಗೂ ಸಾಕಷ್ಟು ಸಾಮ್ಯತೆ ಇದೆ. ಬ್ರಿಟೀಷರು ಬಂದ ನಂತರ ಉಪ್ಪು ಮಾಡುವ ವೃತ್ತಿಯಿಂದ ವಿಮುಖರಾದ ಉಪ್ಪಾರರು ಬುಟ್ಟಿ ತಯಾರಿಕೆ, ಗಾರೆ ಕೆಲಸ, ಮೀನುಗಾರಿಕೆ ಹಾಗೂ ಇನ್ನಿತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡರು ಎಂದು ಹೇಳಿದರು.

  ಪ್ರಸ್ತುತ ಉಪ್ಪಾರ ಸಮುದಾಯದಲ್ಲಿ ಶಿಕ್ಷಣದ ಕೊರತೆ ಸಾಕಷ್ಟಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆಗಾಗಿ ಅವರಿಗೆ ಶಿಕ್ಷಣದ ಅರಿವು ಮೂಡಿಸಬೇಕಾಗಿದೆ. ದೂರದೃಷ್ಟಿಯಿಂದ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಶಿವಮೂರ್ತಿ, ಉಪ್ಪಾರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts