ಬಂಟ್ವಾಳ: ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಕೊನೆಗೂ ದೆಹಲಿಯಿಂದ ಪೊಳಲಿ(ಅಡ್ಡೂರು) ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲಿಸಲು ಪರೀಕ್ಷಾ ಯಂತ್ರ ಸೋಮವಾರ ಆಗಮಿಸಿದೆ.
ಪೊಳಲಿ ಸೇತುವೆಯ ದುರಸ್ತಿಯ ನೆಪದಲ್ಲಿ ಜಿಲ್ಲಾಡಳಿತ ಏಕಾಏಕಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದಲ್ಲದೆ ಎರಡೂ ಬದಿಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಕಣ್ಗಾವಲು ಹಾಕಿತ್ತು.
ಇದರ ಪರಿಣಾಮ ಪೊಳಲಿ ಅಸುಪಾಸಿನ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಪೊಳಲಿ ಕ್ಷೇತ್ರಕ್ಕಾಗಮಿಸುವ ಭಕ್ತರು ತೊಂದರೆ ಅನುಭವಿಸಿದ್ದರು. ಈ ನಡುವೆ ಸೇತುವೆಯ ವಸ್ತುಸ್ಥಿತಿ ಪರಿಶೀಲಿಸಲು ಅಗಮಿಸಿದ್ದ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಗ್ರಾಮಸ್ಥರ ಅಹವಾಲು ಆಲಿಸಿ ಧಾರಣಾ ಪರೀಕ್ಷಾ ಯಂತ್ರ ಪರಿಶೀಲಿಸಿ ನೀಡುವ ವರಧಿಯನ್ನಾಧರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಆದರೆ ಎರಡು ವಾರ ಕಳೆದರೂ ಯಂತ್ರ ಮಾತ್ರ ಪೊಳಲಿ ಸೇತುವೆಯತ್ತ ಬಂದಿರಲಿಲ್ಲ, ಇದರಿಂದ ಮತ್ತೆ ಆಕ್ರೋಶಗೊಂಡ ಸ್ಥಳೀಯ ನಾಲ್ಕೈದು ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ಸೋಮವಾರ ಸಭೆ ಸೇರಿ ಚರ್ಚಿಸುತ್ತಿರುವಾಗಲೇ ಸೇತುವೆಯ ಧಾರಣಾ ಸಾಮರ್ಥ್ಯ ಯಂತ್ರ ಪೊಳಲಿ ಸೇತುವೆಯಲ್ಲಿ ಬಂದಿಳಿದಿದ್ದು, ಸಾಮರ್ಥ್ಯ ಪರೀಕ್ಷಿಸುವ ಕಾರ್ಯವನ್ನು ಆರಂಭಿಸಿದೆ. ಅದು ನೀಡುವ ವರದಿಯ ಆಧಾರ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂಜಿನಿಯರ್ ಅಮರನಾಥ್ ಇದ್ದರು.
ಸುದ್ದಿ ತಿಳಿದ ಸಮಾಲೋಚನಾ ಸಭೆಯಲ್ಲಿದ್ದ ಗ್ರಾಮಸ್ಥರು, ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ವಾಹನ ಸಂಚಾರ ನಿರ್ಬಂಧದಿಂದಾಗಿ ಜನರಿಗಾಗುವ ತೊಂದರೆಯನ್ನು ವಿವರಿಸಿ ಶೀಘ್ರವಾಗಿ ಸಮಸ್ಯೆಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ವೆಂಕಟೇಶ್ ನಾವಡ, ನೂಯಿ ಬಾಲಕೃಷ್ಣ ರಾವ್, ಚಂದ್ರಹಾಸ ಪಲ್ಲಿಪಾಡಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷ ರಾಧಾ ಲೋಕೇಶ್ ಬಡಗಬೆಳ್ಳೂರು, ಉಪಾಧ್ಯಕ್ಷ ರಾಜು ಕೋಟ್ಯಾನ್ ಗರೋಡಿ ಅಮ್ಮುಂಜೆ ಗ್ರಾಪಂ ಉಪಾಧ್ಯಕ್ಷ ರಾಧಾಕ್ರಷ್ಣ ತಂತ್ರಿ, ಬಸ್ ಮಾಲೀಕ ಶಿವ ಪ್ರಸಾದ್, ಅಬೂಬಕ್ಕರ್ ಅಮ್ಮುಂಜೆ, ಚಂದ್ರಶೇಖರ ಶೆಟ್ಟಿ, ಉಮೇಶ್ ಆಚಾರ್ಯ, ವಕೀಲ ಚಂದ್ರಶೇಖರ್ ರಾವ್, ಜಯ ರಾಮಕೃಷ್ಣ ಪೊಳಲಿ, ಕಾರ್ತಿಕ್ ಬಲ್ಲಾಳ್, ಚಂದ್ರಶೇಖರ್ ಭಂಡಾರಿ, ಸುಬ್ರಾಯ ಕಾರಂತ ಮೊದಲಾದವರಿದ್ದರು.