| ಪ್ರಕಾಶ್ ಮಂಜೇಶ್ವರ ಮಂಗಳೂರು
ಎರಡು ವರ್ಷದ ಹೆಣ್ಣು ಮತ್ತು ಎರಡು ತಿಂಗಳ ಗಂಡು ಮಗುವಿದೆ. ತಂದೆ-ತಾಯಿ ಕೋವಿಡ್ನಿಂದ ನಿಧನ ಹೊಂದಿದ್ದಾರೆ. ಈ ಮಕ್ಕಳನ್ನು ರಕ್ಷಿಸಲು ನೆರವಾಗಿ. ದತ್ತು ಪಡೆಯಲು ಯಾರಾದರೂ ಆಸಕ್ತಿ ಹೊಂದಿದ್ದರೆ ದಯವಿಟ್ಟು ಸಂರ್ಪಸಿ.. ಈ ಅಸಹಾಯಕ ಮಕ್ಕಳಿಗೆ ಸಹಾಯ ತಲುಪಲು ಇತರ ಗುಂಪುಗಳಿಗೆ ಗರಿಷ್ಠ ಫಾರ್ವರ್ಡ್ ಮಾಡಿ, ಪ್ಲೀಸ್ ಸಪೋರ್ಟ್...!
ಕೆಲವು ದಿನಗಳಿಂದ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೆಸೇಜ್ ಇದು. ಈ ಮೂಲಕ ಅಕ್ರಮವಾಗಿ ಮಕ್ಕಳ ಮಾರಾಟಕ್ಕೆ ಯತ್ನಿಸುತ್ತಿರುವ ಗುಮಾನಿ ಇದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಉತ್ತರಪ್ರದೇಶದಲ್ಲಿ ಇಂಥ ಕಾನೂನುಬಾಹಿರ ಸಂದೇಶ ಹರಿದಾಡುತ್ತಿದ್ದು, ಅಲ್ಲಿನ ಸರ್ಕಾರ ತನಿಖೆಗೂಆದೇಶಿಸಿದೆ. ಬೆಂಗಳೂರಿನಲ್ಲೂ ಇಂಥ ಸಂದೇಶಗಳು ವೈರಲ್ ಆಗಿವೆ.
ಮಂಗಳೂರಿನಲ್ಲೂ ಸಕ್ರಿಯ?: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೇಲಿನಂತೆ ಒಕ್ಕಣೆ ಇರುವ ವಾಟ್ಸ್ಆಪ್ ಮೆಸೇಜ್ಗಳು ಹರಿದಾಡುತ್ತಿವೆ. ಇಂಥ ಒಂದು ಮೆಸೇಜ್ನಲ್ಲಿ ನಮೂದಿಸಿರುವ ನಂಬರ್ಗೆ ಕರೆ ಮಾಡಿದಾಗ ಸ್ವಿಚ್ಡ್ಆಫ್ ಎಂಬ ಸಂದೇಶ ತೆಲುಗಿನಲ್ಲಿ ಬರುತ್ತಿದೆ. ಟ್ರೂ ಕಾಲರ್ನಲ್ಲಿ ಪರಿಶೀಲಿಸಿದಾಗ ‘ವೇಣಿ ತಿಪ್ಪವಜ್ಲ (ಅಡೋಪ್ಟ್)’ ಎಂಬ ಹೆಸರು ತೋರಿಸುತ್ತಿದೆ. ಆಂಧ್ರಪ್ರದೇಶವನ್ನು ಕೇಂದ್ರೀಕರಿಸಿ ಇಂಥ ಮೋಸ ಮಾಡುವ ಜಾಲ ಕಾರ್ಯಾಚರಿಸುತ್ತಿರಬಹುದು ಎಂಬ ಶಂಕೆ ಇದೆ.
ಇತ್ತೀಚೆಗೆ ಹೆಣ್ಣು ಮಗುವನ್ನು 4 ಲಕ್ಷ ರೂ. ಹಾಗೂ ಗಂಡು ಮಗುವನ್ನು 6 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದೊಂದಿಗೆ ಮಂಗಳೂರು ಪೊಲೀಸರು ಭೇದಿಸಿರುವುದು ಮಕ್ಕಳ ಮಾರಾಟ ದಂಧೆ ಕರಾವಳಿ ಭಾಗದಲ್ಲಿ ಇರುವುದನ್ನು ತೋರಿಸುತ್ತದೆ. ವರ್ಷದ ಹಿಂದೆ ಬಂಟ್ವಾಳದಲ್ಲಿ ನಡೆದ ಒಂದು ಧರ್ಮದ ಮಗುವನ್ನು ಇನ್ನೊಂದು ಧರ್ಮದ ಕುಟುಂಬಕ್ಕೆ ಅಕ್ರಮವಾಗಿ ದತ್ತು ನೀಡಲು ಪ್ರಯತ್ನಿಸಿರುವ ಪ್ರಕರಣ ತನಿಖೆ ಹಂತದಲ್ಲಿದೆ.
ಕಠಿಣ ಕ್ರಮಕ್ಕೆ ಸುಪ್ರೀಂ ಸೂಚನೆ: ಕೋವಿಡ್ನಿಂದ ಅನಾಥರಾದ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುವ ಸಾಧ್ಯತೆ ಸುಪ್ರೀಂ ಕೋರ್ಟ್ ಗಮನಕ್ಕೂ ಬಂದಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಇತ್ತೀಚೆಗೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತ್ತು. ಅನುಕಂಪದ ನೆಪದಲ್ಲಿ ಅನೇಕರು ಅನಾಥ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುವ ಸಾಧ್ಯತೆ ಇದೆ. ಕಾನೂನು ಬಾಹಿರವಾಗಿ ಯಾರೂ ಮಕ್ಕಳನ್ನು ದತ್ತು ಪಡೆಯುವಂತಿಲ್ಲ. ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ಮಧ್ಯಸ್ಥಿಕೆ ಹೊರತಾದ ಯಾವುದೇ ದತ್ತು ಪ್ರಕ್ರಿಯೆಗೆ ಅವಕಾಶ ನೀಡಬಾರದು ಎಂದು ಕೋರ್ಟ್ ತಾಕೀತು ಮಾಡಿದೆ.
ಹೊರರಾಜ್ಯದ ವ್ಯಕ್ತಿಗಳ ನಂಬರ್ಗಳಿಂದ ಇಂಥ ಸಂದೇಶಗಳು ಹರಿದಾಡುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಇಂಥ ಸಂದೇಶಗಳನ್ನು ಫಾರ್ವರ್ಡ್ ಮಾಡಕೂಡದು. ಯಾವುದೇ ಮಗು ತೊಂದರೆಯಲ್ಲಿ ಇದೆ ಎಂದು ಗೊತ್ತಾದರೆ ಮಕ್ಕಳ ಸಹಾಯವಾಣಿ ಟೋಲ್ ಫ್ರೀ ನಂಬರ್ 1098/14499 ಸಂರ್ಪಸಬಹುದು. ಹತ್ತಿರದ ಅಂಗನವಾಡಿಗಳಿಗೂ ಮಾಹಿತಿ ನೀಡಬಹುದು.
| ವಜೀರ್ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದಕ್ಷಿಣಕನ್ನಡ