ಬೆಂಗಳೂರು : ಬಿಬಿಎಂಪಿಯ 198 ವಾರ್ಡ್‌ಗಳ ಮೀಸಲಾತಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ ಸೋಮವಾರಕ್ಕೆ ಮುಕ್ತಾಯವಾಗಿದೆ. ಆದರೆ, ವಾರ್ಡ್ ಮೀಸಲಾತಿ ಸೂಕ್ತವಾಗಿಲ್ಲ ಎಂದು ನೂರಾರು ಆಕ್ಷೇಪಣೆ ಅರ್ಜಿಗಳು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಕೆಯಾಗಿರುವ ಮಾಹಿತಿ ದೊರೆತಿದೆ. ಮೀಸಲಾತಿ ಹಂಚಿಕೆ ವೇಳೆ ಆಯಾ ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಸಮುದಾಯಕ್ಕೆ ಅನುಗುಣವಾಗಿ ಮಿಸಲಾತಿ ನಿಡಬೇಕು. ಆದರೆ, ಮೀಸಲಾತಿ ಹಂಚಿಕೆ ವೇಳೆ ಶೇ.5ಕ್ಕಿಂತ ಕಡಿಮೆಯಿರುವ ಸಮುದಾಯಕ್ಕೆ ಮೀಸಲಾತಿ ನಿಡಿದ್ದಾರೆ. ಇದರಿಂದ ಅಭಿವೃದ್ಧಿಗೆ ಕುಂಠಿತವಾಗಲಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ.
ಬಾಪೂಜಿನಗರ ವಾರ್ಡ್‌ನಿಂದ 60 ಆಕ್ಷೇಪಣೆ: ಬಾಪೂಜಿನಗರ ವಾರ್ಡ್‌ನಲ್ಲಿ 49 ಸಾವಿರ ಜನಸಂಖ್ಯೆಯಿದ್ದು, ಅದರಲ್ಲಿ ಮುಸ್ಲಿಂ ಸಮುದಾಯದ 25 ಸಾವಿರ ಮತ್ತು ಉಳಿದ ಎಲ್ಲ ಸಮುದಾಯ ಸೇರಿ 24 ಸಾವಿರ ಜನಸಂಖ್ಯೆಯಿದೆ. ಪರಿಶಿಷ್ಟ ಜಾತಿಗೆ ಸೇರಿದವರು ಕೇವಲ 2,454 ಮಂದಿಯಿದ್ದು, ಶೇ.5ಕ್ಕಿಂತ ಕಡಿಮೆಯಿದೆ. ಆದರೂ, ಬಾಪೂಜಿನಗರ ವಾರ್ಡ್‌ನ್ನು ಪರಿಶಿಷ್ಟ ಜಾತಿ ಅಭ್ಯರ್ಥಿ ಸ್ಪರ್ಧೆಗೆ ಮೀಸಲು ಮಾಡಲಾಗಿದೆ. ಹೀಗಾಗಿ, ನಮ್ಮ ವಾರ್ಡ್‌ನಿಂದ ಸುಮಾರು 60ಕ್ಕೂ ಅಧಿಕ ಮಂದಿ ಜಿಲ್ಲಾಧಿಕಾರಿ ಕಚೇರಿಗೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದೇವೆ ಎಂದು ಮಾಜಿ ಕಾರ್ಪೋರೇಟರ್ ಅಜ್ಮಲ್‌ಬೇಗ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಮಾನತು ಪ್ರಕರಣದಲ್ಲಿ ವಿಪಕ್ಷದಿಂದ ಕಲಾಪ ಬಹಿಷ್ಕಾರದ ಬೆದರಿಕೆ : ರಾಜ್ಯಸಭಾ ಡೆಪ್ಯುಟಿ ಚೇರ್ಮನ್ ರಿಂದ ನಿರಶನ
ಬ್ಯಾಟರಾಯನಪುರದಲ್ಲಿ ಎಸ್‌ಸಿ ಮೀಸಲಿಲ್ಲ: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 9 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನಸಂಖ್ಯೆ ಅಧಿಕವಾಗಿದ್ದರೂ, ಇಲ್ಲಿ ಒಂದು ವಾರ್ಡ್‌ನ್ನು ಕೂಡ ಪರಿಶಿಷ್ಟ ಜಾತಿಗೆ ಮೀಸಲು ನಿಡಿಲ್ಲ. ಕಳೆದಬಾರಿ ಕುವೆಂಪುನಗರ ಮತ್ತು ಥಣಿಸಂದ್ರ ವಾರ್ಡ್‌ಗಳು ಪರಿಶಿಷ್ಟ ಜಾತಿಗೆ ಮೀಸಲಿದ್ದು, ಈಗ ಬೇರೆ ಮೀಸಲಾತಿಗೆ ಮುಕ್ತಗೊಳಿಸಲಾಗಿದೆ. ಮೀಸಲಾತಿ ಬಗ್ಗೆ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದು, ಒಂದು ವೇಳೆ ನಮ್ಮ ಸಮುದಾಯಕ್ಕೆ ಮಿಸಲಾತಿ ಸಿಗದಿದ್ದರೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವದು ಎಂದು ಮಾದಿಗ ಸಮಸನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕೋಗಿಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.