ಜಿಲ್ಲೆ

ಇನ್ನು ರಿವರ್ಸ್ ಕ್ವಾರಂಟೈನ್: ಕಂಟೇನ್ಮೆಂಟ್ ಮನೆಗೆ ಸೀಮಿತಗೊಳಿಸಲು ಚಿಂತನೆ

lakshmihegde

ಬೆಂಗಳೂರು: ನಗರದಲ್ಲಿ ಕರೊನಾ ಸೋಂಕು ತೀವ್ರವಾಗಿ ಹೆಚ್ಚಳವಾದಲ್ಲಿ ಪಾಸಿಟಿವ್ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ‘ರಿವರ್ಸ್ ಕ್ವಾರಂಟೈನ್’ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.

ಏನಿದು ರಿವರ್ಸ್ ಕ್ವಾರಂಟೈನ್? ಲಾಕ್​ಡೌನ್ ಸಡಿಲಿಕೆ ಕಾರಣ ಉದ್ಯೋಗ, ವ್ಯಾಪಾರ, ಕಾರ್ಖಾನೆ ಹಾಗೂ ಇತರೆ ಕಾರ್ಯಗಳಿಗೆ ಜನ ಹೊರಗೆ ಹೋಗುತ್ತಿದ್ದಾರೆ. ಜತೆಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅವರಲ್ಲಿ ಸೋಂಕಿತರಿದ್ದರೆ ಸಂಪರ್ಕಕ್ಕೆ ಬರುವ ಮಕ್ಕಳು, ವೃದ್ಧರು ಗರ್ಭಿಣಿಯರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸೋಂಕು ಹರಡುವ ಸಾಧ್ಯತೆ ಯಿರುತ್ತದೆ. ಹೀಗಾಗಿ ಆರೋಗ್ಯವಂತ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರನ್ನೇ ಕ್ವಾರಂಟೈನ್ ಮಾಡುವುದೇ ‘ರಿವರ್ಸ್ ಕ್ವಾರಂಟೈನ್’.

ದೇಶದ ಮಹಾನಗರಗಳಿಗೆ ಹೋಲಿಕೆ ಮಾಡಿದಲ್ಲಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಸೋಂಕಿತರ ಸಂಪರ್ಕದಲ್ಲಿರುವವರು ಹಾಗೂ ಲಕ್ಷಣಗಳಿದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಅನ್​ಲಾಕ್ 1.0 ನಂತರ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ರಿವರ್ಸ್ ಕ್ವಾರಂ ಟೈನ್ ಜಾರಿಗೊಳಿಸಲಾಗುವುದು ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಆತಂಕ ಬೇಡ: ನಗರದಲ್ಲಿ ಪ್ರತಿನಿತ್ಯ 2 ಸಾವಿರ ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಕರೊನಾ ಪಾಸಿಟಿವ್ ಕಂಡುಬಂದ ವ್ಯಕ್ತಿ ವಾಸಿಸುವ ಮನೆಯ 100 ಮೀಟರ್ ವ್ಯಾಪ್ತಿ, ಅಪಾರ್ಟ್​ವೆುಂಟ್​ನಲ್ಲಿದ್ದರೆ ಸೋಂಕಿತರ ಮಹಡಿ ಜತೆಗೆ ಕೆಳಗಿನ ಮತ್ತು ಮೇಲಿನ ಮಹಡಿ ಮಾತ್ರ ಕಂಟೇನ್ಮೆಂಟ್ ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು. ಸ್ವಚ್ಛತೆ, ಮಾಸ್ಕ್ ಬಳಕೆ ಹಾಗೂ ವ್ಯಕ್ತಿಗತ ಅಂತರ ಕಾಪಾಡಲು ಸೂಚನೆ ನೀಡಿದರು.

28 ಮಂದಿ ವಿರುದ್ಧ ಎಫ್​ಐಆರ್: ಕರೊನಾ ಸೋಂಕು ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದವರಲ್ಲಿ ನಿಯಮ ಉಲ್ಲಂಘಿಸಿದ 28 ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದ್ದು, 4,086 ಮಂದಿಗೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 27,293 ಮಂದಿಯನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದ್ದು, 6,774 ಮಂದಿ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ದೂರು ಆಧರಿಸಿ ಕೆಲವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ, ಮತ್ತೆ ಹಲವರಿಗೆ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ 761 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎಂದು ಕೋವಿಡ್ ವಾರ್ ರೂಂ ಮಾಹಿತಿ ನೀಡಿದೆ. ಕಲಬುರಗಿ ಜಿಲ್ಲೆಯಲ್ಲಿ 24, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಹಾಗೂ ಬೆಳಗಾವಿಯಲ್ಲಿ ಒಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಗೋಡೆ ಮೇಲೆ ಭಿತ್ತಿಪತ್ರ: ಹೋಂ ಕ್ವಾರಂಟೈನ್​ಗೆ ಒಳಗಾದವರು ಅವಧಿಗೂ ಮುನ್ನ ಹೊರಬಂದರೆ ಅಪಾಯ. ಹೀಗಾಗಿ ಅಂತಹವರ ಬಗ್ಗೆ ಜನರಿಗೆ ತಿಳಿಯಲೆಂದು ಕ್ವಾರಂಟೈನ್​ಗೆ ಒಳಗಾದವರ ಕೈಗೆ ಸೀಲ್ ಹಾಕಲಾಗುತ್ತದೆ. ಮನೆಗಳ ಹೊರಗೋಡೆ ಮೇಲೂ ಭಿತ್ತಿಪತ್ರ ಅಂಟಿಸಲಾಗುತ್ತದೆ. ಬೆಂಗಳೂರಿನಲ್ಲಿ 884, ಹಾಸನ 783, ಬೀದರ್​ನಲ್ಲಿ 614 ಸೇರಿ ನಿಯಮ ಉಲ್ಲಂಘಿಸಿದ 4,086 ಮಂದಿಗೆ ಎಚ್ಚರಿಕೆ ನೀಡಲಾಗಿದೆ.

ಒಂದು ಮನೆಗೆ ಸೀಮಿತ? ನಗರದೆಲ್ಲೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕಂಟೇನ್ಮೆಂಟ್ ವ್ಯಾಖ್ಯಾನ ಬದಲಾಯಿಸಲು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. ಸ್ಥಳೀಯರಿಗೆ ತೊಂದರೆಯಾಗದಂತೆ ಸೋಂಕಿತನ ಮನೆ ಮಾತ್ರ ಕಂಟೇನ್ಮೆಂಟ್ ಮಾಡಲು ಚಿಂತನೆ ನಡೆಸಲಾಗಿದೆ. ಈಗಾಗಲೇ 1 ಕಿ.ಮೀ. ಸುತ್ತಳತೆ ಇದ್ದ ಕಂಟೇನ್ಮೆಂಟ್ ಪ್ರದೇಶವನ್ನು 100 ಮೀ.ಗೆ ಇಳಿಕೆ ಮಾಡಿದ್ದು, ಒಂದು ಮನೆಗೆ ಸೀಮಿತಗೊಳಿಸಿದರೆ ಹೆಚ್ಚಿನ ಸಾರ್ವಜನಿಕರಿಗೆ ತೊಂದರೆಯಾಗುವುದು ತಪ್ಪಲಿದೆ ಎಂದು ಆಯುಕ್ತರು ತಿಳಿಸಿದರು.

ಮುಂಬೈನಿಂದ 525 ಪ್ರಯಾಣಿಕರ ಆಗಮನ: ‘ಉದ್ಯಾನ್ ಎಕ್ಸ್​ಪ್ರೆಸ್’ ವಿಶೇಷ ರೈಲಿನಲ್ಲಿ ಮುಂಬೈನಿಂದ ಬೆಂಗಳೂರಿಗೆ ಶುಕ್ರವಾರ ಬಂದ 525 ಪ್ರಯಾಣಿಕರ ಪೈಕಿ 101 ಮಂದಿಯನ್ನು ಹೋಂ ಕ್ವಾರಂಟೈನ್​ಗೆ ಮತ್ತು 93 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಬೆಳಗ್ಗೆ 9.30ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ರೈಲು ಬಂದಿದ್ದು, ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿ ಗಂಟಲು ದ್ರವ ಸಂಗ್ರಹಿಸಲಾಯಿತು. ನಂತರ ಬಿಬಿಎಂಪಿ ಅಧಿಕಾರಿಗಳು ಪ್ರಯಾಣಿಕರ ಮುಂಗಡ ಟಿಕೆಟ್ ಬುಕಿಂಗ್, ಪ್ರಯಾಣ ವಿವರ ಸೇರಿ ಕೆಲ ಮಾಹಿತಿ ಸಂಗ್ರಹಿಸಿದರು. ಬಳಿಕ 93 ಮಂದಿಯನ್ನು ಬಿಎಂಟಿಸಿ ಬಸ್​ಗಳಲ್ಲಿ ಕರೆದೊಯ್ದು ಹೋಟೆಲ್ ಹಾಗೂ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಿದರು. ಮಕ್ಕಳು, ಹಿರಿಯ ನಾಗರಿಕರು ಸೇರಿ 101 ಮಂದಿಗೆ ಹೋಂ ಕ್ವಾರಂಟೈನ್​ಗೆ ಕಳುಹಿಸಲಾಯಿತು.

5 ಸಾವಿರ ಮಂದಿ ನಿಗಾಬಂಧನ: ಬೆಂಗಳೂರಿನಲ್ಲಿ ಇದುವರೆಗೂ 5,022 ಮಂದಿ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಇವರಲ್ಲಿ 884 ಮಂದಿ ನಿಯಮ ಉಲ್ಲಂಘಿಸಿದ್ದಾರೆ. ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಗಂಭೀರ ಶಿಕ್ಷೆಗೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಕೊಪ್ಪಳದಲ್ಲಿ 2,318 ಮಂದಿ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದು, 657 ಮಂದಿ ನಿಯಮ ಉಲ್ಲಂಘಿಸಿದ್ದಾರೆ.