ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಎರಡು ದಿನ ಮಾತ್ರ ಶೂರತ್ವ ತೋರಿದ ಪಾಲಿಕೆ, ಸೂಕ್ತ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮತ್ತೆ ಸ್ಥಗಿತಗೊಳಿಸಿದೆ. ಬಲಾಢ್ಯರು ಮಾಡಿಕೊಂಡಿರುವ ಒತ್ತುವರಿಯನ್ನು ತೆರವು ಮಾಡದ ಬಿಬಿಎಂಪಿ ಅಧಿಕಾರಿಗಳು, ಬರಿ ಬಡವರ ಮೇಲೆಯೇ ಪೌರುಷ ತೋರಿಸುತ್ತಿದ್ದಾರೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಚರ್ಚೆಯಾಗುತ್ತಿದೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ನಗರ ಪ್ರದಕ್ಷಿಣೆ ವೇಳೆ ಒತ್ತುವರಿದಾರರ ವಿರುದ್ಧ ಗುಡುಗಿದ್ದರು. ಬಳಿಕ ಒಮ್ಮೆ ಮಾತ್ರ ಮಹದೇವಪುರ ಹಾಗೂ ಕೆ.ಆರ್. ಪುರ ವಲಯ ವ್ಯಾಪ್ತಿಯಲ್ಲಿ ನಾಮ್ ಕೇ ವಾಸ್ತೆ ಎಂಬಂತೆ ಒತ್ತುವರಿ ಕಾರ್ಯಾಚರಣೆಗೆ ತೆರವು ಮಾಡಲಾಗಿತ್ತು. ಇದಾದ ಬಳಿಕ, ಒತ್ತುವರಿ ವಿಚಾರದಲ್ಲಿ ಇಲಾಖೆಗಳ ನಡುವಿನ ಸಮನ್ವಯ ಕೊರತೆ, ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಬಗ್ಗೆ ತಹಸೀಲ್ದಾರ್ ಪಾಲಿಕೆಯ ಗಮನಕ್ಕೆ ತರದಿರುವುದು ಸೇರಿ ಇತರ ಕಾರಣಗಳಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ಅಲ್ಲದೆ, ತಹಸೀಲ್ದಾರ್ ಎಡವಟ್ಟಿನಿಂದಾಗಿ ಮಹದೇವಪುರ ಹಾಗೂ ಕೆ.ಆರ್.ಪುರ ವಲಯ ವ್ಯಾಪ್ತಿಯಲ್ಲಿ ಕಳೆದ ಶನಿವಾರ ಬೆಳಗ್ಗೆ ಜೆಸಿಬಿ ಸಮೇತ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವನ್ನು ತೆರವುಗೊಳಿಸಲು ತೆರಳಿದ್ದ ವೇಳೆ ಪಾಲಿಕೆ ಅಧಿಕಾರಿಗಳಿಗೆ, ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವ ಪತ್ರವನ್ನು ಸ್ಥಳೀಯರು ತೋರಿಸಿದರು. ಹೀಗಾಗಿ, ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಮೊಟುಕುಗೊಳಿಸಿದ ಅಧಿಕಾರಿಗಳು ಮುಜುಗರಕ್ಕೀಡಾಗಿದ್ದರು. ಸೋಮವಾರ ಮತ್ತೆ ಆರಂಭಿಸಲಾಗಿದ್ದರೂ ಹೇಳಿಕೊಳ್ಳುವಷ್ಟು ತೆರವು ಕಾರ್ಯಾಚರಣೆ ನಡೆದಿಲ್ಲ.
ನಗರದ ಇತರ ವಲಯಗಳಿಗಿಂತ ಮಹದೇವಪುರ ಹಾಗೂ ಕೆ.ಆರ್.ಪುರದಲ್ಲಿ ಅತಿ ಹೆಚ್ಚು ಸರ್ಕಾರಿ ಜಾಗ, ರಾಜಕಾಲುವೆ ಒತ್ತುವರಿಯಾಗಿದೆ. ರಾಜಧಾನಿಯಲ್ಲಿ ಅಂದಾಜು 571 ಕಡೆಗಳಲ್ಲಿ ಪ್ರಭಾವಿಶಾಲಿಗಳು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸರ್ವೇಯಲ್ಲಿ ಬಯಲಾಗಿದೆ. ಇದನ್ನು ಮೊದಲು ಗುರುತು ಹಾಕಬೇಕು. ನಂತರ, ಭೂಮಾಪಕರು ಸರ್ವೇ ನಡೆಸಿ ನಕ್ಷೆಯನ್ನು ಸಿದ್ಧಪಡಿಸಬೇಕು. ತಹಸೀಲ್ದಾರ್ ಇದಕ್ಕೆ ಅರ್ಡರ್ ಪಾಸ್ ಆದೇಶ ಜಾರಿಮಾಡಬೇಕು. ಬಳಿಕ, ಒತ್ತುವರಿ ಕಾರ್ಯಾಚರಣೆ ನಡೆಸಬೇಕು. ಆದರೆ, ಪಾಲಿಕೆ ಅಧಿಕಾರಿಗಳು ಈ ನೆಲೆಯಲ್ಲಿ ಸರಿಯಾಗಿ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ನೆಪಮಾತ್ರಕ್ಕೆ ನಾಲ್ಕೈದು ಕಡೆ ಒತ್ತುವರಿ ತೆರವುಗೊಳಿಸಿ ಈಗ ಸುಮ್ಮನಾಗಿದ್ದಾರೆ.
ಬೊಮ್ಮನಹಳ್ಳಿ ವಲಯದ ದೊಡ್ಡಕಲ್ಲಸಂದ್ರ ಗ್ರಾಮದಲ್ಲಿ ಅಂದಾಜು 50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪಾಲಿಕೆ ಬುಧವಾರ ವಶಪಡಿಸಿಕೊಂಡಿದೆ. ವಾರ್ಡ್ ಸಂಖ್ಯೆ 197ರ ವ್ಯಾಪ್ತಿಯ ನಾರಾಯಣನಗರ 1ನೇ ಹಂತದ ದೊಡ್ಡಕಲ್ಲಸಂದ್ರ ಗ್ರಾಮದ ಸರ್ವೇ ಸಂಖ್ಯೆ 79/5ಎ ರಲ್ಲಿ ಆಟದ ಮೈದಾನಕ್ಕೆಂದು ಗುರುತಿಸಿ ಮೀಸಲಿಟ್ಟಿದ್ದ ಪಾಲಿಕೆ ಜಾಗವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.