ಜಿಲ್ಲೆ

ಬಿಬಿಎಂಪಿಯಿಂದ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿ ಕಾರ್ಯಾಚರಣೆ

ಹರೀಶ್​​ ಕೆ.ಸಿ.

ಬೆಂಗಳೂರು: ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಹಾಗೂ ಮಹದೇವಪುರ ವಲಯಗಳ ವ್ಯಾಪ್ತಿಯಲ್ಲಿನ ಪಾದಚಾರಿ ಮಾರ್ಗಗಳ ಅನಧಿಕೃತ ಒತ್ತುವರಿಯನ್ನು ಶನಿವಾರ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.

ವಲಯ ಆಯುಕ್ತ, ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ವಿವಿಧ ಸ್ಥಳಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡ ಪರಿಣಾಮ ನಾಗರಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದ್ದುದನ್ನು ಮನಗಂಡ ಅಧಿಕಾರಿಗಳು, ದಕ್ಷಿಣ ವಲಯದ ಜಯನಗರ 1ನೇ ಬ್ಲಾಕ್​ನ 3ನೇ ಅಡ್ಡರಸ್ತೆ, ಲಕ್ಕಸಂದ್ರ ವಾರ್ಡ್​ನ 16ನೇ ಅಡ್ಡರಸ್ತೆ, ರಾಜರಾಜೇಶ್ವರಿನಗರ ವಲಯದ ನಾಗರಭಾವಿ 2ನೇ ಹಂತದ 6ನೇ ಅಡ್ಡರಸ್ತೆ ಹಾಗೂ ಮಹದೇವಪುರ ವಲಯದ ಹಳೇ ವಿಮಾನ ನಿಲ್ದಾಣದ ರಸ್ತೆಯ ಮಾರತ್ತಹಳ್ಳಿ ಸೇತುವೆ ಮುಖ್ಯರಸ್ತೆಯಲ್ಲಿನ ಫುಟ್​ಪಾತ್​ಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಿದರು. ಈ ವೇಳೆ ಅನಧಿಕೃತವಾಗಿ ಅಳವಡಿಸಿದ್ದ ಓವರ್​ ಹೆಡ್​ ಕೇಬಲ್​ ತೆರವುಗೊಳಿಸಲಾಯಿತು.

ಓವರ್​ಹೆಡ್​ ಕೇಬಲ್​ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿರುವ ಜತೆಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಅಪಘಾತಗಳಿಗೆ ಆಹ್ವಾನ ನೀಡುತ್ತಿತ್ತು. ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಮಾರ್ಗಗಳಲ್ಲಿ ಶಾಶ್ವತ ಪೆಟ್ಟಿಗೆಗಳಿದ್ದರೆ ವಶಕ್ಕೆ ಪಡೆದು ಮತ್ತೊಮ್ಮೆ ಒತ್ತುವರಿ ಮಾಡದಂತೆ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು. ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿ ಇತರೆ ಅಧಿಕಾರಿಗಳಿದ್ದರು.

ಯಲಹಂಕ,ಪೂರ್ವ ವಲಯದಲ್ಲಿ ತೆರವು: ಯಲಹಂಕ ವಲಯದ ದಾಸರಹಳ್ಳಿ ಮುಖ್ಯ ರಸ್ತೆ,ಬ್ಯಾಟರಾಯನಪುರ,ಬಳ್ಳಾರಿ ರಸ್ತೆ, ಹೆಬ್ಬಾಳ- ಕೆಂಪಾಪುರ, ಆರ್​ಎಂಝಡ್​, ಲ್ಯಾಟಿಟ್ಯೂಡ್​ ರೆಸಿಡೆನ್ಸಿ ರಸ್ತೆ, ದಾಸರಹಳ್ಳಿ ಕೆಂಪಾಪುರ ಮುಖ್ಯ ರಸ್ತೆಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಲಾಯಿತು. ಯಲಹಂಕ ಸ್ಯಾಟಲೈಟ್​ ಟೌನ್​ನಲ್ಲಿ ಅಳವಡಿಸಲಾಗಿದ್ದ ಬ್ಯಾನರ್​ ತೆರವುಗೊಳಿಸಲಾಯಿತು. ಬ್ಯಾಟರಾಯನಪುರ ವಿಭಾಗದ ಸಹಕಾರನಗರದ ಮುಖ್ಯ ರಸ್ತೆಗಳಲ್ಲಿ ಸುಮಾರು 2 ಕಿ.ಮೀ.ವರೆಗೆ ಮರಗಳ ಮತ್ತು ಕಂಬಗಳ ಮೇಲೆ ಹಾದುಹೋಗಿ ನೇತುಬಿದ್ದಿರುವ ಓಎಫ್​​​ಸಿ ಕೇಬಲ್​ ತೆರವುಗೊಳಿಸಲಾಯಿತು. ಪೂರ್ವ ವಲಯ ಶಿವಾಜಿನಗರ ವಿಭಾಗದ ಮಿಲ್ಲರ್​ ರಸ್ತೆ, ಕಂಟೋನ್ಮೆಂಟ್​ ರೈಲ್ವೆ ಕ್ವಾರ್ಟಸ್​, ಜಯಮಹಲ್​, ತಿಮ್ಮಯ್ಯ ರಸ್ತೆ, ವಸಂತನಗರ ಹಾಗೂ ಶಾಂತಿನಗರ ಉಪ ವಿಭಾಗದ ಲಕ್ಷ್ಮಿ ರಸ್ತೆಯಲ್ಲಿ ರಸ್ತೆಬದಿ ಮತ್ತು ಪಾದಚಾರಿ ಮಾರ್ಗಗಳ ಅಂಗಡಿಗಳನ್ನು ತೆರವುಗೊಳಿಸಿ ಸಿಲಿಂಡರ್​, ಸ್ಟೌವ್​, ಟೇಬಲ್​, ಹಣ್ಣಿನ ಟ್ರೇಗಳು, ಅಡುಗೆ ಪಾತ್ರೆಗಳು ಸೇರಿ ಇತರೆ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು.