ಜಿಲ್ಲೆ

ರಾಜಧಾನಿಯಲ್ಲಿ ಈ ಬಾರಿ ಮಳೆ ಅನಾಹುತ ಕಡಿಮೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಮಳೆಗಾಲ ಸಂದರ್ಭದಲ್ಲಿ ರಾಜಧಾನಿಯ ಕೆಲ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವುದು ಸಹಜ. ಆದರೆ, ರಾಜಕಾಲುವೆಗಳಲ್ಲಿ ಹೂಳು ತೆಗೆದಿರುವುದು ಸೇರಿ ಇತರೆ ಕ್ರಮಗಳಿಂದ ಈ ಬಾರಿ ಮಳೆಯಿಂದ ಅನಾಹುತವಾಗುವ ಪ್ರಮಾಣ ಕಡಿಮೆ ಇರಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮೇ ಮತ್ತು ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಏನು ಅನಾಹುತವಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಬಿದ್ದರೂ ಅದನ್ನು ಎದುರಿಸಲು ನಾವೆಲ್ಲರೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ವಲಯಗಳಲ್ಲಿಯೂ ಕಂಟ್ರೋಲ್ ರೂಂ ಸೇರಿ ಆಯುಕ್ತರು, ಜಲಮಂಡಳಿ ಸೇರಿ ಪ್ರಮುಖ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿ ವಾರ ಆಯಾ ವಲಯ ಆಯುಕ್ತರ, ಮುಖ್ಯ ಇಂಜಿನಿಯರ್‌ಗಳ ಸೇರಿ ಪ್ರಮುಖ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂದಿನ ವಾರ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಕ್ರಿಯಾಯೋಜನೆ ಬಗ್ಗೆ ಚರ್ಚಿಸಲಾಗುತ್ತದೆ. ಇದರಲ್ಲಿ ಚರ್ಚಿಸಿದ್ದ ಅಂಶಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದಕ್ಷಿಣ, ಆರ್.ಆರ್.ನಗರ, ಯಲಹಂಕ, ದಾಸರಹಳ್ಳಿ, ಮಹದೇವಪುರ ವಲಯಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲು ಅನುದಾನ ಕೇಳಲಾಗಿದೆ. ಇದನ್ನು ಪರಿಶೀಲಿಸಿ ಅನುದಾನವನ್ನು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರದಡಿ ಫೆಬ್ರವರಿವರೆಗೆ ನಡೆದಿರುವ ಕಾಮಗಾರಿಗಳ ಬಿಲ್‌ಗಳನ್ನು ಕ್ಲಿಯರ್ ಮಾಡಲಾಗಿದೆ. ಬಿಬಿಎಂಪಿ ಅನುದಾನದಡಿ ಫೆಬ್ರವರಿವರೆಗೆ ಆಗಿರುವ ಕಾಮಗಾರಿಗಳನ್ನೂ ಬಿಲ್ ಕ್ಲಿಯರ್ ಮಾಡಲಾಗಿದೆ. ವಿವಿಧ ಕಾರಣಗಳಿಂಧ ಬಾಕಿ ಉಳಿದಿರುವ ಅಂದಾಜು 3 ಸಾವಿರ ಕೋಟಿ ರೂ.ಬಿಲ್‌ಗಳನ್ನು ಹಂತ ಹಂತವಾಗಿ ಪಾವತಿಸುವುದಾಗಿ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.