ಜಿಲ್ಲೆ

11,715 ಕೋಟಿ ರೂ. ಬಿಬಿಎಂಪಿ ಬಜೆಟ್​ಗೆ ಸರ್ಕಾರ ಸಮ್ಮತಿ: ಆಡಳಿತ, ಪ್ರತಿಪಕ್ಷಗಳ ನಾಯಕರಿಗೆ ತಲಾ 5 ಕೋಟಿ ರೂಪಾಯಿ ಕಡಿತ

ಬೆಂಗಳೂರು: ಬಿಬಿಎಂಪಿ ಮಂಡಿಸಿದ 2020-21ರ ಬಜೆಟ್ ಮೊತ್ತದಲ್ಲಿ 254 ಕೋಟಿ ರೂ. ಕಡಿತಗೊಳಿಸಿ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರ 11,715 ಕೋಟಿ ರೂ. ಆಯವ್ಯಯಕ್ಕೆ ಅನುಮೋದನೆ ನೀಡಿದೆ. ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಏ.20ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ 10,895 ಕೋಟಿ ರೂ. ಬಜೆಟ್ ಮಂಡಿಸಿದ್ದರು. ಕೌನ್ಸಿಲ್ ಚರ್ಚೆ ಬಳಿಕ ಮತ್ತೆ ಅದಕ್ಕೆ 1,074 ಕೋಟಿ ರೂ. ಸೇರ್ಪಡೆಗೊಳಿಸಿ 11,969 ಕೋಟಿ ರೂ. ಮೊತ್ತದ ಬಜೆಟ್ ಅನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು.

ಶಿಕ್ಷಣಕ್ಕೆ 30 ಕೋಟಿ ರೂ. ಹೆಚ್ಚಳ: ಬಿಬಿಎಂಪಿ ಶಾಲೆ-ಕಾಲೇಜುಗಳ ದುರಸ್ತಿ ಮತ್ತು ಅಭಿವೃದ್ಧಿಗೆ 10 ಕೋಟಿ ರೂ. ಮೀಸಲಿಟ್ಟಿದ್ದು, ಅದನ್ನು ಪರಿಷ್ಕರಣೆ ಮಾಡಿರುದ ಸರ್ಕಾರ 20 ಕೋಟಿ ರೂ.ಗೆ ಅನುದಾನ ಹೆಚ್ಚಿಸಿದೆ. ಅಂಗನವಾಡಿಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ನೀಡಿದೆ. ಮಕ್ಕಳ ಸಮವಸ್ತ್ರಕ್ಕೆ 8.5 ಕೋಟಿ ರೂ. ಮೀಸಲಿಟ್ಟಿದ್ದು, ಅದನ್ನು 3.5 ಕೋಟಿ ರೂ.ಗೆ ಕಡಿತ ಮಾಡಿದೆ. ಆದರೆ, ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಮೀಸಲಿಟ್ಟಿದ್ದ 6 ಕೋಟಿ ರೂ. ಕಡಿತಗೊಳಿಸಿದೆ.

ತಲಾ 5 ಕೋಟಿ ರೂ. ಕಡಿತ: 15ನೇ ಹಣಕಾಸು ಆಯೋಗದ 558 ಕೋಟಿ ರೂ. ಅನುದಾನ ಹಂಚಿಕೆಯನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಅದರಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗೆ ನೀಡಲಾದ ಅನುದಾನದಲ್ಲಿ ಪಕ್ಷಗಳ ಪ್ರಮುಖ ನಾಯಕರ ವಾರ್ಡ್​ಗಳಿಗೆ ತಲಾ 5 ಕೋಟಿ ರೂ. ಕಡಿತ ಮಾಡಿದೆ. ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್​ರ ಜಕ್ಕೂರು ವಾರ್ಡ್​ಗೆ ನೀಡಲಾಗಿದ್ದ 20 ಕೋಟಿ ರೂ. ಗಳಲ್ಲಿ, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ವಾರ್ಡ್​ಗೆ ನೀಡಿದ್ದ 13 ಕೋಟಿ ರೂ.ನಲ್ಲಿ ಹಾಗೂ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಅವರ ವಾರ್ಡ್​ಗೆ ಬಿಬಿಎಂಪಿ ಹಂಚಿಕೆ ಮಾಡಿದ್ದ 10 ಕೋಟಿ ರೂ.ನಲ್ಲಿ ತಲಾ 5 ಕೋಟಿ ರೂ. ಕಡಿತ ಮಾಡಲಾಗಿದೆ.

ರಾಜಕಾಲುವೆಗೆ ಅನುದಾನ ಕಡಿತ: ಬೃಹತ್ ನೀರುಗಾಲುವೆ ವಾರ್ಷಿಕ ನಿರ್ವಹಣೆಗೆ ಬಿಬಿಎಂಪಿ 75 ಕೋಟಿ ರೂ. ಮೀಸಲಿಟ್ಟಿತ್ತು. ಸರ್ಕಾರ ಅದನ್ನು ಪರಿಷ್ಕರಿಸಿ 25 ಕೋಟಿ ರೂ. ಹಂಚಿಕೆ ಮಾಡಿದೆ. 8 ಆರ್ಟಿರಿಯಲ್ ಮತ್ತು ಹಲವು ಸಬ್ ಆರ್ಟಿರಿಯಲ್ ರಸ್ತೆಗಳ ಅಭಿವೃದ್ಧಿಗೆ ಪಾಲಿಕೆ ನೀಡಿದ್ದ 120 ಕೋಟಿ ರೂ.ಗಳಲ್ಲಿ 115 ಕೋಟಿ ರೂ. ಕಡಿತಗೊಳಿಸಿದೆ. ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗೆ ಥಣಿಸಂದ್ರ ಮತ್ತು ಹೆಬ್ಬಾಳ ವಾರ್ಡ್​ಗೆ ಬಿಬಿಎಂಪಿ ನೀಡಲಾಗಿದ್ದ ಹಣದಲ್ಲಿ 10 ಕೋಟಿ ರೂ. ಕಡಿತಗೊಳಿಸಿ ಗೊಟ್ಟಿಗೆರೆ ವಾರ್ಡ್​ಗೆ 5 ಕೋಟಿ ರೂ. ಅನುದಾನ ನಿಗದಿ ಮಾಡಿದೆ.

ಶೇ.30 ಲೇಖಾನುದಾನಕ್ಕೆ ಒಪ್ಪಿಗೆ: ಬಿಬಿಎಂಪಿ ಮಂಡಿಸಿದ್ದ ಒಟ್ಟಾರೆ ಬಜೆಟ್​ನಲ್ಲಿ ಶೇ.30 ಅನುದಾನವನ್ನು ಬಳಕೆ ಮಾಡಿಕೊಳ್ಳಲು ಲೇಖಾನುದಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದರ ಜತೆಗೆ ಕರೊನಾ ನಿರ್ವಹಣೆಗೆ ಎಲ್ಲ 198 ವಾರ್ಡ್​ಗಳಿಗೆ ತಲಾ 20 ಲಕ್ಷ ರೂ.ಗಳನ್ನು ಖರ್ಚು ಮಾಡಲು 39.6 ಕೋಟಿ ರೂ. ಬಳಸಲು ಸಮ್ಮತಿ ನೀಡಿದೆ.

ಅಧ್ಯಯನ ಪೀಠದ ಅನುದಾನಕ್ಕೆ ಕತ್ತರಿ: ಬೆಂವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಆರಂಭಿಸಲು ಬಿಬಿಎಂಪಿ 50 ಕೋಟಿ ರೂ. ಅನುದಾನ ನೀಡಿತ್ತು. ಅದರಲ್ಲಿ 25 ಕೋಟಿ ರೂ.ಗಳನ್ನು ಸರ್ಕಾರ ಕಡಿತ ಮಾಡಿದೆ. ಕಸಾಪ ನಗರ ಜಿಲ್ಲಾ ಕಟ್ಟಡ ನಿರ್ವಣಕ್ಕೆ ನೀಡಲಾಗಿದ್ದ 1 ಕೋಟಿ ರೂ. ನಲ್ಲಿ 25 ಲಕ್ಷ ರೂ. ಕಡಿತ ಮಾಡಿದೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ದತ್ತಿ ಶಿಕ್ಷಣ ಸಂಸ್ಥೆಗಳಿಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ನೀಡಲು 25 ಲಕ್ಷ ರೂ. ಅನುದಾನ ಮೀಸಲಿರಿಸಿದೆ.