ಜಿಲ್ಲೆ

ಬಿಬಿಎಂಪಿ ಅಧಿಕಾರಿ ಮನೆಯಲ್ಲಿ ಭಾರಿ ಅಕ್ರಮ ಆಸ್ತಿ ಪತ್ತೆ: ನಗದು, ಕೆಜಿಗಟ್ಟೆಲೆ ಚಿನ್ನಾಭರಣ ವಶ!

ರಮೇಶ್​ ಕುಮಾರ್​​ ಬಿ ಎಡಮೋಳೆ

ದಾವಣಗೆರೆ: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಬೊಮ್ಮನಹಳ್ಳಿ ವಿಭಾಗದ ಎಇಇ ಆಂಜಿನಪ್ಪ ಅವರ ದಾವಣಗೆರೆ ನಿವಾಸದ ಮೇಲೆ ಶನಿವಾರ ನಡೆದ ಎಸಿಬಿ ದಾಳಿ ವೇಳೆ ಬೃಹತ್​ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಆಂಜಿನಪ್ಪರ ಮನೆ ಹಾಗೂ 4 ಕಡೆ ಎಸಿಬಿ ದಾಳಿ ಮಾಡಿದೆ. ಆಂಜಿನಪ್ಪ ಮೂಲತಃ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮ ನಿವಾಸಿ. ಇಂದು ಮುಂಜಾನೆ ಗ್ರಾಮದ ಮನೆಯ ಮೇಲೆ ಎಸಿಬಿ ದಾಳಿ ಮಾಡಿದೆ. ಅಲ್ಲದೆ, ಬೆಂಗಳೂರಿನ ಜೀವನ್ ಭೀಮ್ ನಗರದ ಕ್ವಾರ್ಟಸ್, ಚನ್ನಗಿರಿ ತಾಲೂಕಿನ ಎರೇಹಳ್ಳಿ ಗ್ರಾಮದ ಮನೆ ಸೇರಿ 4 ಕಡೆ ದಾಳಿ ಮಾಡಲಾಗಿದೆ.

ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ಹತ್ತಕ್ಕೂ ಹೆಚ್ಚು ಕಡೆ ಆಸ್ತಿ ಮಾಡಿರುವುದು ಬಹಿರಂಗವಾಗಿದೆ. ಒಟ್ಟು 3.98 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 35 ಲಕ್ಷ ರೂ. ನಗದು, 1.2ಕೆ.ಜಿ. ಚಿನ್ನಾಭರಣ ಹಾಗೂ 9ಕೆ.ಜಿ. ಬೆಳ್ಳಿ ಸಾಮಗ್ರಿ ದೊರೆತಿದೆ. 73 ಲಕ್ಷ ರೂ. ಮೌಲ್ಯದ 15 ಎಕರೆ 20 ಗುಂಟೆ ಅಡಕೆತೋಟ, 44.30 ಲಕ್ಷ ರೂ. ಮೌಲ್ಯದ ಕಾರು, ಬೈಕ್ ಮತ್ತು ಗೃಹಬಳಕೆ ವಸ್ತುಗಳು ಪತ್ತೆಯಾಗಿವೆ. (ದಿಗ್ವಿಜಯ ನ್ಯೂಸ್​)