ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆ ಆದಾಗಿನಿಂದ ಪ್ರಬಲ ಖಾತೆ ನೀಡಿಲ್ಲ ಎಂದು ಅಸಮಾಧಾನಗೊಂಡು ಸಚಿವರಾಗಿಯು ಅಧಿಕಾರವನ್ನು ಸ್ವೀಕರಿಸದೇ ಅನೇಕ ದಿನಗಳವರೆಗೆ ಬೇಸರಗೊಂಡಿದ್ದ ಸಚಿವ ಆನಂದ್ ಸಿಂಗ್ ಮುನಿಸು ಕೊನೆಗೂ ತಣ್ಣಗಾಗಿದ್ದು, ರಾಜೀನಾಮೆ ವದಂತಿಗೆ ಕೊನೆಗೂ ತೆರೆಬಿದ್ದಿದೆ.
ಇಂದು ವಿಕಾಸಸೌಧದಲ್ಲಿ ಮಾತನಾಡಿದ ಆನಂದ್ ಸಿಂಗ್, ಪಕ್ಷ ಹಾಗೂ ಮುಖ್ಯಮಂತ್ರಿಗಳ ಆದೇಶದಂತೆ ಪ್ರವಾಸೋದ್ಯಮ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸುವೆ. ಈ ಹಿಂದೆ ನಾನು ಮಾಡಿದ ಖಾತೆ ಬದಲಾವಣೆ ಮನವಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ವರಿಷ್ಠರ ಜತೆಗೆ ಚರ್ಚಿಸಿ ಮನವಿ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆಂದು ಹೇಳಿದರು.
ಇದಕ್ಕೂ ಮುಂಚೆ ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕಟೀಲ್ ಅವರು ವಸ್ತುಸ್ಥಿತಿ ವಿವರಿಸುವ ಮೂಲಕ ಆನಂದ್ ಸಿಂಗ್ ಮನವೊಲಿಸಿ ಮುನಿಸು ಶಮನಗೊಳಿಸಿದರು ಎಂದು ಹೇಳಲಾಗಿದೆ.