ಪಡುಬಿದ್ರಿ: ಪಲಿಮಾರು ಬರಮಾಡಿ ಶ್ರೀ ಸಂತಾನ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಜ.1ರಿಂದ ಆರಂಭಗೊಂಡಿದ್ದು, 6ರವೆರೆಗೆ ನಡೆಯಲಿದೆ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮುಂದೆ ಪಾಕಶಾಲೆ ಸಹಿತ ಭೋಜನಶಾಲೆ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
*5ರಂದು ಬೆಳಗ್ಗೆ 9.45ಕ್ಕೆ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿಸುವರು. 11ಕ್ಕೆ ಮಹಾಪೂಜೆ ಮತ್ತು ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ. 10ರಿಂದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರಿಂದ ಧಾರ್ಮಿಕ ಪ್ರವಚನ, ಸಂಜೆ 7ಕ್ಕೆ ಮಹಾರಂಗಪೂಜೆ, ಉತ್ಸವ ಬಲಿ, ಅವಭೃತ ಸ್ನಾನ ನೆರವೇರಲಿದೆ ಎಂದರು.
4ರಂದು ಸಂಜೆ ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಬಳಿಕ ಪಲಿಮಾರು ನವೋದಯ ಕಲಾವೃಂದದವರಿಂದ ಬೈರಾಸ್ ಭಾಸ್ಕರೆ ತುಳು ಸಾಮಾಜಿಕ ಹಾಸ್ಯ ನಾಟಕ, 5ರಂದು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಘವೇಂದ್ರ ರಾವ್ ಪುತ್ತಿಗೆಮನೆ ತಿಳಿಸಿದರು.
ಪಲಿಮಾರು ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ.ದಿನೇಶ್ ಪ್ರಭು, ಉಪಾಧ್ಯಕ್ಷ ರಾಯೇಶ್ವರ ಪೈ, ಕಾರ್ಯದರ್ಶಿ ಪಿ.ರಾಘವೇಂದ್ರ ರಾವ್, ಕೋಶಾಧಿಕಾರಿ ಪಿ.ಮುಕುಂದ ಭಟ್ ಉಪಸ್ಥಿತರಿದ್ದರು.
5ರಂದು ಸಂಜೆ 5ಕ್ಕೆ ಪಲಿಮಾರು ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣ ಆಸ್ರಣ್ಣ, ರಾಜ್ಯ ಸರ್ಕಾರದ ಸಚಿವರು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ವಿನಯಕುಮಾರ್ ಸೊರಕೆ ಸಹಿತ ವಿವಿಧ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಪಾಲ್ಗೊಳ್ಳುವರು.