ಜಿಲ್ಲೆ

20.37 ಲಕ್ಷ ರೂ. ನಿವ್ವಳ ಲಾಭ : ಕೆ.ರವೀಂದ್ರ ಕಂಬಳಿ ಅಭಿಮತ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ 2024-25ನೇ ಸಾಲಿನಲ್ಲಿ 371 ಲಕ್ಷ ರೂ. ವ್ಯವಹಾರ ನಡೆಸಿ 20.37 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ರವೀಂದ್ರ ಕಂಬಳಿ ತಿಳಿಸಿದರು.

ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಿದರು.

ಸಂಘದ ಪಾಲು ಬಂಡವಾಳ 11.64 ಲಕ್ಷ ರೂ. ಮೀರಿದ್ದು, 2,943 ಲಕ್ಷ ರೂ. ಠೇವಣಿ ಹೊಂದಿದೆ. 3157 ಲಕ್ಷ ರೂ. ದುಡಿಯುವ ಬಂಡವಾಳವಿದ್ದು, ಯಾವುದೇ ಬ್ಯಾಂಕ್‌ನ ಸಾಲವಿಲ್ಲದೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರಿ ಸಂಘದಲ್ಲಿ 2,577 ಲಕ್ಷ ರೂ. ಠೇವಣಿ ಹೂಡಿದೆ. 536 ಲಕ್ಷ ರೂ. ಹೊರಬಾಕಿ ಸಾಲ ನೀಡಲಾಗಿದೆ. ಸಂಘವು ಪ್ರಸಕ್ತ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ಎ ವರ್ಗ ಪಡೆದಿದೆ ಎಂದರು.

ಪಾಣೆಮಂಗಳೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಸಭೆ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಶಿಕಲಾ ಉಡುಪ, ನಿರ್ದೇಶಕರಾದ ವೆಂಕಟ್ರಾಯ ಪ್ರಭು, ಬಿ.ಟಿ.ನಾರಾಯಣ ಭಟ್, ಜ್ಞಾನೇಶ್ವರ ಪ್ರಭು,ಪದ್ಮನಾಭ ಕಿದೆಬೆಟ್ಟು, ರಾಯಿ ಸುಂದರ ಭಂಡಾರಿ, ಮನೋರಾಜ್ ಎ., ಪೂವಪ್ಪ, ರಾಮ ನಾಯ್ಕ, ರತ್ನಾ ಇದ್ದರು. ಸಿಇಒ ಯು.ಧರ್ಮಪಾಲ ಭಂಡಾರಿ ವರದಿ ವಾಚಿಸಿದರು. ನಿರ್ದೇಶಕ ಪೊಳಲಿ ವೆಂಕಟೇಶ್ ನಾವಡ ವಂದಿಸಿದರು.