ಕುಂಬಳೆ: ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ ಬಣ್ಣದ ಮಹಾಲಿಂಗ ಅವರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗುರುವಾರ ಸೀತಾಂಗೋಳಿ ಸಮೀಪದ ಪೆರ್ಣೆಯಲ್ಲಿ ನಡೆಯಿತು.
ಉದ್ಯಮಿ ಶಿವಶಂಕರ ಹಾಗೂ ಜಯಲಕ್ಷ್ಮೀ ಉದ್ಘಾಟಿಸಿದರು. ಬಣ್ಣ ಮಹಾಲಿಂಗ ಯಕ್ಷ ಪ್ರತಿಷ್ಠಾನ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಜಯಾನಂದ ಸಂಪಾಜೆಯವರು ಬಣ್ಣದ ಮಹಾಲಿಂಗ ಸಂಸ್ಮರಣೆಗೈದರು.
ಬಣ್ಣದ ವೇಷಧಾರಿಗಳಾದ ಸುರೇಶ್ ಕುಪ್ಪೆಪದವು, ಮಾಧವ ಪಾಟಾಳಿ ನೀರ್ಚಾಲು ಅವರಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲ ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣ ಮಾಡಿದರು.
ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಯಜಮಾನ ಶ್ರೀಕೃಷ್ಣಯ್ಯ ಅನಂತಪುರ ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ರಮೇಶ್ ಚೆಟ್ಟಿಯಾರ್, ಕೆ.ರಾಮ ಮುಗ್ರೋಡಿ, ಕೆ.ಸಿ.ಪಾಟಾಳಿ, ಬಣ್ಣದ ಸುಬ್ರಾಯ ಸಂಪಾಜೆ, ಮಹಾಲಿಂಗ ಕೆ.ದೇರೇಬೈಲು, ತಿಮ್ಮಪ್ಪ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.
ನಿತ್ಯ ಕನ್ನಿಕೆ ಶ್ರೀ ಮುಚ್ಚಿಲೋಟಮ್ಮ ಭಕ್ತಿಗೀತೆ ಅಲ್ಬಮನ್ನು ಶಿವಶಂಕರ ನೆಕ್ರಾಜೆ ಬಿಡುಗಡೆಗೊಳಿಸಿದರು. ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಿದರು. ದಾಮೋದರ ಪಾಟಾಳಿ ನಿರೂಪಿಸಿದರು. ಸುಬ್ಬಪ್ಪ ಪಟ್ಟೆ ವಂದಿಸಿದರು.