ವಿಜಯಪುರ: ಜಿಲ್ಲೆಯ ಎಂಟು ವಿಧಾನ ಸಭೆ ಕ್ಷೇತ್ರಗಳಲ್ಲಿ ಬಂಜಾರಾ ಸಮುದಾಯದ ಜನಸಂಖ್ಯೆ 2ಲಕ್ಷಕ್ಕೂ ಅಧಿಕ ಇದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದು, ಜೆಡಿಎಸ್ ಮಾತ್ರ ನಾಗಠಾಣ ಕ್ಷೇತ್ರಕ್ಕೆ ಟಿಕೆಟ್ ನೀಡಿದೆ. ಹೀಗಾಗಿ ಆ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸಲು ಸಮಾಜ ಒಮ್ಮತದ ನಿರ್ಣಯ ಕೈಗೊಂಡಿದೆ ಎಂದು ಬಂಜಾರಾ ಸಮುದಾಯದ ಮಠಾಧೀಶರು ಒಕ್ಕೋರಲಿನಿಂದ ತಿಳಿಸಿದರು.
ರಾಷ್ಟ್ರೀಯ ಪಕ್ಷಗಳು ಬಂಜಾರಾ ಸಮುದಾಯವನ್ನು ಕಡೆಗಣಿಸುತ್ತಿವೆ. ಅಲ್ಲದೇ, ಮೀಸಲಾತಿ ವಿಚಾರದಲ್ಲೂ ಸಾಕಷ್ಟು ಅನ್ಯಾಯ ಮಾಡುತ್ತಿವೆ. ಹೀಗಾಗಿ ಸ್ಥಳೀಯ ರಾಜಕೀಯ ಆಧರಿಸಿ, ಸಮುದಾಯದ ಹಿತದೃಷ್ಠಿಯಿಂದ ಆಯಾ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತಿದೆ. ಜೊತೆಗೆ ನಾಗಠಾಣ ಕ್ಷೇತ್ರದಲ್ಲಿ ಡಾ.ದೇವಾನಂದ ಚವಾಣ್ ಅವರನ್ನು ಗೆಲ್ಲಿಸಲು ನಿರ್ಧರಿಸಲಾಗಿದೆ ಎಂದು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಶ್ರೀ ನಂದುಲಾಲ ಮಠದ ಗೋಪಾಲ ಮಹಾರಾಜರು ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಬಂಜಾರಾ ಸಮುದಾಯಕ್ಕೆ ಟಿಕೆಟ್ ನೀಡಲು ಅವಕಾಶಗಳಿದ್ದರೂ ಕಡೆಗಣಿಸಲಾಯಿತು. ಸಮುದಾಯದ ಪ್ರಾಮಾಣಿಕತೆ, ನಿಷ್ಠೆಯನ್ನು ಮೆಚ್ಚಿ ಎಚ್.ಡಿ. ಕುಮಾರಸ್ವಾಮಿ ದೇವಾನಂದಗೆ ಟಿಕೆಟ್ ನೀಡಿದ್ದಾರೆ. ಈಗಾಗಲೇ ದೇವಾನಂದ ಚವಾಣ್ ಒಂದು ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಗೆಲುವಿನ ಸಾಧ್ಯತೆ ದಟ್ಟವಾಗಿದ್ದು, ಕ್ಷೇತ್ರ ಉಳಿಸಿಕೊಳ್ಳಲು ಸರ್ವರೂ ಕೈಜೋಡಿಸಬೇಕೆಂದು ಸಮುದಾಯ ಬಾಂಧವರಲ್ಲಿ ವಿನಂತಿಸಿದರು.
ನಾಗಠಾಣ ಕ್ಷೇತ್ರದಲ್ಲಿ ಕೆಲವರು ದೇವಾನಂದ ಚವಾಣ್ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ. ನಮ್ಮದೇ ಸಮಾಜದವರು ನಾಗಠಾಣ ಕ್ಷೇತ್ರಕ್ಕೆ ಹೋಗಿ ದೇವಾನಂದ ವಿರುದ್ದ ಮಸಲತ್ತು ನಡೆಸಿದ್ದಾರೆ. ಇದನ್ನು ಸಮಾಜದ ಎಲ್ಲ ಸ್ವಾಮೀಜಿಗಳು ಖಂಡಿಸುವುದಾಗಿ ತಿಳಿಸಿದರಲ್ಲದೇ, ಒಮ್ಮತದಿಂದ ಚುನಾವಣೆ ನಡೆಸಿ ಸಮುದಾಯದ ಹಿತ ಕಾಯ್ದುಕೊಳ್ಳಲು ಮನವಿ ಮಾಡಿದರು.
ಕೇಸರಟ್ಟಿಯ ಸೋಮಲಿಂಗ ಮಹಾಸ್ವಾಮೀಜಿ ಮಾತನಾಡಿ, ನಾಗಠಾಣದಲ್ಲಿ 30 ಸಾವಿರ ಜನಸಂಖ್ಯೆ ಇದೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಹಾಗೂ ಲಿಂಗಾಯತ ಸಮುದಾಯ ಒಮ್ಮತದಿಂದ ಜೆಡಿಎಸ್ ಬೆಂಬಲಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಗೆಲುವು ನಿಶ್ಚಳವಾಗಿದ್ದು, ಸರ್ವರೂ ಸಹಕರಿಸಬೇಕೆಂದರು.
ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ ಮಾಡಲಾಗುತ್ತಿದೆ. ಕಾಂಗ್ರೆಸ್ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಒಳಮೀಸಲಾತಿ ಮತ್ತು ಸದಾಶಿವ ಆಯೋಗ ವರದಿ ಜಾರಿಗೆ ನಮ್ಮ ವಿರೋಧ ಇದೆ. ಆದರೂ, ಬಂಜಾರಾ ಸಮುದಾಯಕ್ಕೆ ಬಿಜೆಪಿ 10-12 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದರೆ, ಕಾಂಗ್ರೆಸ್ ಕೂಡ 5-6 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದೆ. ಹೀಗಾಗಿ ಅನುಕೂಲಕ್ಕೆ ತಕ್ಕಂತೆ ಆಯಾ ಸ್ಥಳೀಯ ಸ್ಥಿತಿ ನೋಡಿಕೊಂಡು ಚುನಾವಣೆ ಮಾಡುತ್ತಿದ್ದೇವೆ. ಆ ಪ್ರಕಾರ ನಾಗಠಾಣ ಕ್ಷೇತ್ರದಲ್ಲಿ ದೇವಾನಂದ ಚವಾಣ್ ಅವರನ್ನು ಗೆಲ್ಲಿಸುವ ತೀರ್ಮಾನ ಕೈಗೊಂಡಿದ್ದಾಗಿ ತಿಳಿಸಿದರು.
ಆಹೇರಿ ತಾಂಡಾದ ಸಂಜೀವ ಮಹಾರಾಜ, ಲಿಂಗಸೂರಿನ ಸಿದ್ದಲಿಂಗ ಮಹಾರಾಜ, ಚವಡಾಪುರದ ಮುರಾರಿ ಮಹಾರಾಜ, ಸುರೇಶ ಮಹಾರಾಜ, ಗೋಪಾಲ ಮಹಾರಾಜ, ಶಂಕರ ಮಹಾರಾಜ ಮತ್ತಿತರರಿದ್ದರು.