More

    ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆಗಳ ವಿತರಣೆ ಪ್ರಕರಣ, ತನಿಖೆಯೂ ಇಲ್ಲ- ಕ್ರಮವೂ ಇಲ್ಲ !

    ವಿಜಯಪುರ: ಝಳಕಿ ಸಮೀಪದ ಜೇವೂರ ಗ್ರಾಮದ ಶಾಂತಿ ನಗರದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಕಳೆದ ಏಪ್ರಿಲ್ 28 ರಂದು ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಿದ ಬಗ್ಗೆ ‘ವಿಜಯವಾಣಿ’ ಮೇಲಾಧಿಕಾರಿಗಳ ಗಮನ ಸೆಳೆದಿತ್ತು. ತ್ವರಿತವಾಗಿ ಸ್ಪಂದಿಸಿರುವ ಜಿಪಂ ಸಿಇಒ ರಾಹುಲ್ ಶಿಂಧೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಗುತ್ತಿಗೆದಾರರ ಮೇಲೆ ಎಫ್‌ಐಆರ್ ದಾಖಲಿಸುವ ಬಗ್ಗೆ ಹೇಳಿದ್ದರು. ಆ ಪ್ರಕಾರ ಕೆಳ ಹಂತದ ಅಧಿಕಾರಿಗಳಿಗೆ ಸಂದೇಶವೇನೋ ರವಾನೆಯಾಗಿದೆ. ಆದರೆ, ಸಂಬಂಧಿಸಿದ ತಾಲೂಕು ಅಧಿಕಾರಿಗಳು ಕ್ರಮಕ್ಕೆ ಮೀನ ಮೇಷ ಎಣಿಸುತ್ತಿರುವುದು ಕಂಡು ಬಂದಿದೆ.

    ಗುತ್ತಿಗೆದಾರರ ವೈಫಲ್ಯ

    ಇಂಡಿ ತಾಲೂಕಿನ ಅಂಗನವಾಡಿಗಳಿಗೆ ಮೊಟ್ಟೆಗಳನ್ನು ವಿತರಿಸುವ ಗುತ್ತಿಗೆಯನ್ನು ತಾಳಿಕೋಟೆಯ ಗುತ್ತಿ ಬಸವೇಶ್ವರ ಎಂಬ ಸಂಸ್ಥೆಗೆ ನೀಡಲಾಗಿದೆ. ಸಮರ್ಪಕವಾಗಿ ಮೊಟ್ಟೆ ವಿತರಿಸದ ಕಾರಣ ಈಗಾಗಲೇ ಈ ಸಂಸ್ಥೆಗೆ ನೋಟಿಸ್ ನೀಡಿದ್ದಾಗಿ ಸಿಡಿಪಿಒ ಸುಮಂಗಲಾ ಹಿರೇಮನಿ ತಿಳಿಸುತ್ತಾರೆ. ಆದರೆ, ಅದರ ಪರಿಣಾಮ ಏನು? ಎಂಬುದಕ್ಕೆ ಸಮರ್ಪಕ ಉತ್ತರವಿಲ್ಲ. ಇನ್ನು ಕೊಳೆತ ಮೊಟ್ಟೆಗಳ ವಿತರಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಮೇಲಾದ ಕ್ರಮ ಏನು? ಘಟನೆಗೆ ಕಾರಣರಾರು? ಲೋಪ-ದೋಷ ಕಂಡು ಬಂದಿದ್ದೆಲ್ಲಿ? ಎಂಬ ಪ್ರಶ್ನೆಗಳಿಗೆ ಸರ್ಪಕವಾದ ಉತ್ತರವಿಲ್ಲ. ವರದಿ ತಯಾರಿಸುತ್ತಿದ್ದು ಶೀಘ್ರದಲ್ಲಿಯೇ ಸಲ್ಲಿಸುವುದಾಗಿ ಸಿಡಿಪಿಒ ಸುಮಂಗಲಾ ಹಿರೇಮನಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

    ಇನ್ನಾದರೂ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮಕ್ಕಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಕಂಡು ಬಂದಲ್ಲಿ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂಬುದು ಸ್ಥಳೀಯರ ಆಕ್ರೋಶ ಭರಿತ ಆಪಾದನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts