More

    ಬ್ಯಾಂಕ್‌ಗೆ ಕನ್ನ ಹಾಕಿದ್ದ ಆರೋಪಿಗಳ ಬಂಧನ

    ಝಳಕಿ: ಧೂಳಖೇಡ ಗ್ರಾಮದ ಭೀಮಾಶಂಕರ ಸಹಕಾರಿ ಬ್ಯಾಂಕ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ಹೇಳಿದರು.

    ಗ್ರಾಮದಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೊಲ್ಲಾಪುರ ಜಿಲ್ಲೆಯ ಕುರಗೋಟ ಗ್ರಾಮದ ಮಲ್ಲಿಕಾರ್ಜುನ ಹೊನಮಾನೆ, ಲತೀಫ್ ಮಕಾನದಾರ, ಮಾಳಪ್ಪ ಸಲಗರೆ ಹಾಗೂ ನೆರೆಯ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಅಬ್ದುಲ್ ಚೀನಿ, ಬಾಗಲಕೋಟೆ ನಗರದ ನಿತೇಶ ನೀಲವಣಿ, ಹುಲಗಪ್ಪ ಪಾತ್ರೋಟ ಅವರನ್ನು ಬಂಧಿಸಲಾಗಿದೆ.

    ಫೆ.29 ರಂದು ಬ್ಯಾಂಕ್‌ಗೆ ಕನ್ನ ಹಾಕಲಾಗಿತ್ತು. ಲಾಕರ್‌ನಲ್ಲಿದ್ದ ಒಟ್ಟು 19.54 ಲಕ್ಷ ರೂ. ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಕಳ್ಳರ ಜಾಲ ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಇಂಡಿ ಪೊಲೀಸ್ ಉಪಾಧೀಕ್ಷಕ ಜಗದೀಶ ಎಚ್.ಎಸ್. ಮಾರ್ಗದರ್ಶನದಲ್ಲಿ ಚಡಚಣ ವೃತ್ತ ಸಿಪಿಐ ಎಚ್.ಡಿ.ಮುಲ್ಲಾ, ಪಿಎಸ್‌ಐ ರಾಘವೇಂದ್ರ ಕೋತ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

    ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದ ನಮ್ಮ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಗ್ಗೆ 6 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 7.65 ಲಕ್ಷ ನಗದು, ಎರಡು ವಾಹನ, ಮೋಟರ್ ಸೈಕಲ್ ಹಾಗೂ 6 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

    ಈ ಪೈಕಿ 4 ಆರೋಪಿಗಳ ಮೇಲೆ ಈಗಾಗಲೇ ಪ್ರಕರಣಗಳಿದ್ದು, ಒಂದೂವರೆ ತಿಂಗಳ ಹಿಂದೆಯೇ ಬಿಡುಗಡೆಯಾಗಿದ್ದರು. ಬ್ಯಾಂಕ್‌ನಲ್ಲಿ ಕಳ್ಳತನ ನಡೆಸುವ ಕುರಿತು ಜೈಲಿನಲ್ಲೇ ಕುಳಿತು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ. ಇನ್ನಷ್ಟು ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದ್ದು, ಶೀಘ್ರ ಅವರನ್ನೂ ಪತ್ತೆ ಹಚ್ಚಿ ಉಳಿದ ಹಣವನ್ನು ವಶಪಡಿಸಿಕೊಳ್ಳಲಾಗುವುದು ಎಂದರು.

    ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲು ಸೋನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts