ಬೆಂಗಳೂರು: ಕರೊನಾ ಲಾಕ್ಡೌನ್ ಜಾರಿ ಆಗಿರುವುದರಿಂದ ಹಾಗೂ ಅದು ಮತ್ತೆ ಮತ್ತೆ ವಿಸ್ತರಣೆಗೊಂಡಿರುವುದರಿಂದ ಹಲವರಿಗೆ ಮನೆಯಿಂದ ಹೊರ ಹೋಗಲೂ ಆಗುತ್ತಿಲ್ಲ. ಲಾಕ್ಡೌನ್ ಸಮಯದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ದೂರು ಹೇಳಿಕೊಳ್ಳಲಿಕ್ಕೂ ಆಗದೆ ಪರದಾಡುತ್ತಿರುವವರು ಅನೇಕರಿರಬಹುದು. ಅಂಥವರು ನಾಳೆ ನೇರವಾಗಿ ಪೊಲೀಸ್ ಕಮಿಷನರ್ ಅವರಲ್ಲೇ ದೂರು ಹೇಳಿಕೊಳ್ಳಬಹುದು.
ಹೌದು.. ಲಾಕ್ಡೌನ್ ಅವಧಿಯಲ್ಲಿ ಜನರಿಗೆ ದೂರು ಹೇಳಿಕೊಳ್ಳಲು ಅವಕಾಶವಾಗಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಜನಸ್ನೇಹಿ ಹೆಜ್ಜೆ ಇಟ್ಟಿದ್ದಾರೆ. ಆ ಮೂಲಕ ಅವರು ಸಾರ್ವಜನಿಕರಿಂದ ನೇರವಾಗಿ ದೂರನ್ನು ಸ್ವೀಕರಿಸಲು ಮುಂದಾಗಿದ್ದಾರೆ. ಈ ಬಗ್ಗೆ ಅವರೇ ಖುದ್ದು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..
ಲಾಕ್ಡೌನ್ ಜಾರಿಯಾದ ನಂತರದಲ್ಲಿ ನಮ್ಮನ್ನು ತಲುಪದ ಕೆಲವು ದೂರುಗಳು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ. ಅಂಥ ದೂರುಗಳನನು ಆಲಿಸುವ ಸಲುವಾಗಿ ವರ್ಚುವಲ್ ಆಗಿ ನಾನು ನಾಳೆ ನಿಮಗೆ ಸಿಗಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಅರ್ಥಾತ್, ನಾಳೆ ಜೂ. 5ರ ಬೆಳಗ್ಗೆ 11.30ಕ್ಕೆ ಅವರು @BlrCityPolice ಫೇಸ್ಬುಕ್ ಪೇಜ್ನಲ್ಲಿ ಲೈವ್ ಆಗಿ ಬರಲಿದ್ದು, ಜನರ ಅಹವಾಲುಗಳನ್ನು ಆಲಿಸಿ ಉತ್ತರಿಸಲಿದ್ದಾರೆ.
ಬೆಂಗಳೂರು ಪೊಲೀಸ್ ಇಲಾಖೆಯ ಅಧಿಕೃತ ಫೇಸ್ಬುಕ್ ಪೇಜ್ ಲಿಂಕ್: https://facebook.com/BlrCityPolice