ಬೆಂಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿ, ಸಮವಸ್ತ್ರ ಕಡ್ಡಾಯ ಎಂಬ ಸರ್ಕಾರದ ಆದೇಶವನ್ನು ಎತ್ತಿ ಹಿಡಿದು ಹೈಕೋರ್ಟ್ ನೀಡಿದ ತೀರ್ಪಿನಿಂದ ಅಸಮಾಧಾನಗೊಂಡಿರುವ ಮುಸ್ಲಿಂ ಮುಖಂಡರು ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೂ ಮುಸ್ಲಿಂ ಮುಖಂಡರು ಬಂದ್ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಸ್ಲಿಂ ಮುಖಂಡರನ್ನು ಕರೆಸಿ ಸಭೆ ನಡೆಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಕಮಿಷನರ್ ತಾಕೀತು ಮಾಡಿದ್ದಾರೆ.
ನಾಳೆ ಮುಸ್ಲಿಂ ಮುಖಂಡರು ಬಂದ್ಗೆ ಕರೆ ಕೊಟ್ಟಿದ್ದಾರೆ. ಅವರು ನಾಳೆ ಹೊರಗಡೆ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದಿಲ್ಲ, ಆಫೀಸ್ಗೆ ಹೋಗುವವರನ್ನು ಬಲವಂತವಾಗಿ ತಡೆಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ಅವರು ಭರವಸೆ ನೀಡಿದಾಗ್ಯೂ ಬಂದೋಬಸ್ತ್ಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಗಸ್ತಿನಲ್ಲಿ ಇರುತ್ತಾರೆ. ಕೆಲವು ಕಡೆ ರೂಟ್ ಮಾರ್ಚ್ ಮಾಡಲಾಗುವುದು. ಅಲ್ಲದೆ ಹೆಚ್ಚಿನ ಬಂದೋಬಸ್ತ್ಗಾಗಿ 25 ಕೆಎಸ್ಆರ್ಪಿ ತುಕಡಿಗಳನ್ನು, 35 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.