ಕಂಪ್ಲಿಯಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕುವೆಂಪು ಸಂಸ್ಮರಣೋತ್ಸವದಲ್ಲಿ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಜೀರು ಮಲ್ಲಿಕಾರ್ಜುನ ಮಾತನಾಡಿದರು. 
ಬಳ್ಳಾರಿ

ಕುವೆಂಪು ತತ್ವಾದರ್ಶಗಳು ಎಂದಿಗೂ ಪ್ರಸ್ತುತ

ಶಶಿಧರ ಎಲ್

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ಜೀರು ಮಲ್ಲಿಕಾರ್ಜುನ ಅಭಿಮತ
  • ಕುವೆಂಪು ಸಂಸ್ಮರಣೋತ್ಸವ
  • ಕುವೆಂಪು ವಿಚಾರಧಾರೆ’ ಕುರಿತು ಉಪನ್ಯಾಸ
ಕಂಪ್ಲಿ: ವೈಚಾರಿಕ ಮತ್ತು ವೈಜ್ಞಾನಿಕ ಭಾರತಕ್ಕಾಗಿ ಕುವೆಂಪು ಸಾಹಿತ್ಯವನ್ನು ಅನುಸರಿಸುವ ಅಗತ್ಯ ಇದೆ ಎಂದು ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಜೀರು ಮಲ್ಲಿಕಾರ್ಜುನ ಹೇಳಿದರು.
ಕುವೆಂಪು ಸಂಸ್ಮರಣೋತ್ಸವ ನಿಮಿತ್ತ ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕುವೆಂಪು ವಿಚಾರಧಾರೆ’ ಕುರಿತು ಉಪನ್ಯಾಸ ನೀಡಿದರು. ಮನುಜಮತ ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣತೆ, ನಿರಂಕುಶಮತಿ ಮೊದಲಾದ ತತ್ವ, ಆದರ್ಶಗಳು ಯಾವತ್ತೂ ಪ್ರಸ್ತುತವಾಗಿವೆ ಎಂದರು.
ಕುವೆಂಪು ಬರಹಗಳು ಸಮ ಸಮಾಜ ನಿರ್ಮಾಣ, ಆತ್ಮೋದ್ಧಾರ, ನಾಡಪ್ರೇಮವನ್ನು ಪ್ರೇರೇಪಿಸುತ್ತವೆ. ಕುವೆಂಪು ಅವರಿಂದ ನಿಸರ್ಗ-ದೇಶಪ್ರೇಮ, ಮಾನವೀಯತೆ, ಮೌಢ್ಯ ವಿರೋಧಿ ಮನೋಭಾವನೆ ಬೆಳೆಸಿಕೊಳ್ಳಲು ಸಾಧ್ಯ. ಕರ್ನಾಟಕದ ಏಕೀಕರಣ ಚಳವಳಿ, ಕನ್ನಡಿಗರ ಸಂಘಟನೆಯಲ್ಲಿ ಕುವೆಂಪು ಸಾಹಿತ್ಯ ಮಹತ್ವದ ಪಾತ್ರ ವಹಿಸಿದೆ ಎಂದ ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಕವಿತೆಗಳು ಸಾಮರಸ್ಯ, ಸಹಿಷ್ಣುತೆ, ಸಹೋದರತ್ವದ ಮನೋಭಾವನೆಗಳನ್ನು ಬೆಳಸಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದರು.
ವೀರಮ್ಮ ನಾಗರಾಜ, ಜೀರು ಮಲ್ಲಿಕಾರ್ಜುನ ಕುವೆಂಪು ಗೀತೆಗಳನ್ನು ಹಾಡಿದರು. ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಮುಖರಾದ ಪೋಡಿ ನಾರಾಯಣಪ್ಪ, ಎಲಿಗಾರ ವೆಂಕಟರೆಡ್ಡಿ, ಪ್ರತಿಷ್ಠಾನದ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಬಂಗಿ ದೊಡ್ಡ ಮಂಜುನಾಥ, ಎಸ್.ಶಾಮಸುಂದರರಾವ್, ಅಂಬಿಗರ ಮಂಜುನಾಥ, ಚಂದ್ರಯ್ಯ ಸೊಪ್ಪಿಮಠ, ಎಚ್.ನಾಗರಾಜ, ಮುದುಕಪ್ಪ ನೆಲಜೇರಿ, ಯು.ಎಂ.ವಿದ್ಯಾಶಂಕರ್, ಕೆ.ಯಂಕಾರೆಡ್ಡಿ, ಗಂಡಿ ಗಣೇಶ, ರಾಮಚಂದ್ರ ಚಿತ್ರಗಾರ, ಪೀರಸಾಬ್ ಹಂಚಿನಾಳ, ಗುರುಬಸಮ್ಮ, ನಟರಾಜ ಸಾಮಂತ್ರಿ ಇತರರಿದ್ದರು.