ಜಿಲ್ಲೆ

ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಬಲಿಜ ಸಮುದಾಯ ಪ್ರತಿಭಟನೆ

ಹರೀಶ್​​ ಕೆ.ಸಿ.

ಬೆಂಗಳೂರು:ಚಾಮರಾಜಪೇಟೆಯ ಒಂದನೇ ಮುಖ್ಯರಸ್ತೆಯಲ್ಲಿರುವ ಆನೇಕಲ್​ ತಿಮ್ಮಯ್ಯ ಚಾರಿಟಬಲ್​ ಟ್ರಸ್ಟ್​ನ ದತ್ತಿ ಸಂಸ್ಥೆಗೆ ಸೇರಿದ್ದ ಜಾಗವನ್ನು ಅಕ್ರಮವಾಗಿ ಕಬಳಿಸಲು ಹುನ್ನಾರ ನಡೆಸುತ್ತಿರುವ ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡ ವಿರುದ್ಧ ಬಲಿಜ ಸಮುದಾಯದ ಜನರು ಶುಕ್ರವಾರ ತೀವ್ರವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ.ಎಸ್​.ರಾಮಯ್ಯ ವಿದ್ಯಾ ಸಮೂಹ ಸಂಸ್ಥೆಗಳ ಛೇರ್ಮನ್​ ಎಂ.ಆರ್​.ಜಯರಾಂ ಮುಂದಾಳತ್ವದಲ್ಲಿ ಟ್ರಸ್ಟ್​ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಕಪ್ಪುಪಟ್ಟಿ ಧರಿಸಿ "ಧಿಕ್ಕಾರ ಧಿಕ್ಕಾರ ಶಿವರಾಮೇಗೌಡ ಧಿಕ್ಕಾರ', "ಶಿವರಾಮೇಗೌಡ ಹಠಾವೋ ಬಿಲಿಜ ಹಾಸ್ಟಲ್​ ಬಚಾವೋ', "ಬೇಕೆ ಬೇಕು ನ್ಯಾಯ ಬೇಕು'," ತೊಲಗು ತೊಲಗು ಶಿವರಾಮೇಗೌಡ ತೊಲಗು' ಫಲಕಗಳನ್ನು ಹಿಡಿದು ಪ್ರತಿಭಟನಕಾರರು ಸಿಟ್ಟು ವ್ಯಕ್ತಪಡಿಸಿದರು. ರಾಜ್ಯ ಮೂಲೆ ಮೂಲೆಯಿಂದ ಸಾವಿರಾರು ಸಮುದಾಯದ ಜನರು ಆಗಮಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬ ಸಂದೇಶವನ್ನು ವಿರೋಧಿಗಳಿಗೆ ನೀಡಿದರು. ಮುಂದೆ ನಡೆಯುವ ಎಂತಹ ಹೋರಾಟಕ್ಕೆ ನಾವೆಲ್ಲರೂ ಸಿದ್ಧರಾಗಿದ್ದು,ಸಮುದಾಯದ ಮುಂಚೂಣಿ ನಾಯಕರಿಗೆ ಸಹಕಾರ ನೀಡುವುದಾಗಿ ಬೆಂಬಲ ಸೂಚಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಂ.ಆರ್​.ಜಯರಾಂ ಮಾತನಾಡಿ, ಸಮುದಾಯದ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್​ಗೆ ಸೇರಿದ ಜಾಗವನ್ನು ಅತಿಕ್ರಮಿಸಲು ಮುಂದಾಗಿರುವ ಎಲ್​.ಆರ್​.ಶಿವರಾಮೇಗೌಡ ರಾಕ್ಷಸ ಗುಣವುಳ್ಳವನು. ಈತ ಬಲಾಢ್ಯ ವ್ಯಕ್ತಿ. ಈತನ ವಿರುದ್ಧ ಧರ್ಮಯುದ್ಧದಂತೆ ನಾವೆಲ್ಲರೂ ಹೋರಾಟ ನಡೆಸೋಣ. ಸಮುದಾಯದ ಎಲ್ಲರೂ ಒಗ್ಗಟ್ಟಾಗಿದ್ದು, ಮುಂದೆ ಬರುವ ಕಠಿಣ ಸವಾಲುಗಳನ್ನು ಎದುರಿಸೋಣ ಎಂದರು.

ಸಮುದಾಯದ ಸ್ವಹಿತಾಸಕ್ತಿ ಬಿಟ್ಟು ಹೋದಾಗ, ಸ್ವಲ್ಪ ಸ್ವಾರ್ಥ ಇಟ್ಟುಕೊಂಡು ಕೆಲಸ ಮಾಡಿದಾಗ ಇಂತಹ ದೊಡ್ಡ ತಪ್ಪುಗಳಾಗುತ್ತದೆ. ಕೆಟ್ಟ ವ್ಯಕ್ತಿಯ ಹಿಂದೆ ಹೋಗಿರುವುದೇ ದೊಡ್ಡ ತಪ್ಪು. ಹಿಂದಿನ ಟ್ರಸ್ಟ್​ನ ಪದಾಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಿತ್ತು. ಇದೀಗ ನಮ್ಮನ್ನೇ ನಾವು ಕೀಳಾಗಿ ನೋಡುವ ಪರಿಸ್ಥಿತಿ ಬಂದೊಗಿದೆ. ಯಾವುದೇ ಕಾರಣಕ್ಕೂ ಕೆಟ್ಟ ವ್ಯಕ್ತಿಯನ್ನು ಬಿಡಬಾರದು. ಕೆಟ್ಟವನಿಗೆ ಸಹಾಯ ಮಾಡಿದರೆ ನಮ್ಮನ್ನೇ ಮುಗಿಸುತ್ತಾನೆ. ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ. ಬಲಿಜ ಸಮುದಾಯ ಚಿಕ್ಕ ಸಮಾಜವಾದರೂ ದೊಡ್ಡ ಮನಸ್ಸು ಹೊಂದಿರುವಂತಹ ಸಮಾಜವಾಗಿದೆ. ಎಲ್ಲರನ್ನೂ ಒಳ್ಳೆತನದಿಂದ ಕರೆದುಕೊಂಡು ಹೋಗುವ ಸಮಾಜ ನಮ್ಮದು ಎಂದು ಎಂ.ಆರ್​.ಜಯರಾಂ ಹೇಳಿದರು. ಮಾಜಿ ಮೇಯರ್​ ಪದ್ಮಾವತಿ, ಮಾಜಿ ಶಾಸಕ ಆರ್​.ವಿ.ದೇವರಾಜು ಪತ್ನಿ ಮಮತಾ, ಸಮುದಾಯದ ಪ್ರಮುಖ ಮುಖಂಡರಾದ ನವೀನ್​ ಕಿರಣ್​, ವೆಂಕಟೇಶ್​ ಮಾತನಾಡಿದರು.

20,928 ಚದರ ಅಡಿ ಜಾಗ ಕಬಳಿಕೆಗೆ ಯತ್ನ

ಆನೇಕಲ್​ ತಿಮ್ಮಯ್ಯ ಚಾರಿಟಬಲ್​ ಟ್ರಸ್ಟ್​ಗೆ ಸೇರಿದ್ದ ಜಾಗದಲ್ಲಿ ಎಲ್​.ಆರ್​.ಶಿವರಾಮೇಗೌಡ ಮತ್ತು ಆತನ ಕುಟುಂಬದ ಒಡೆತನದವರು "ರಾಯಲ್​ ಕಾನ್​ಕಾರ್ಡ್​ ಎಜುಕೇಷನಲ್​ ಟ್ರಸ್ಟ್​' ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಶಾಲೆ ನಡೆಸುತ್ತಿದ್ದಾರೆ. ನಿಯಮಬಾಹಿರವಾಗಿ ಬಾಡಿಗೆ ಕರಾರು ಒಪ್ಪಂದ ಪ್ರಕಾರವೇ 16 ಕೋಟಿ ರೂ.ಬಾಡಿಗೆ ಹಣವನ್ನು ನೀಡಬೇಕಿತ್ತು. ಈವರೆಗೆ ನಯಾಪೈಸೆಯೂ ಕೊಟ್ಟಿಲ್ಲ. ಟ್ರಸ್ಟ್​ಗೆ ಸೇರಿದ ಅಂದಾಜು 20,928 ಚದರ ಅಡಿ ಜಾಗವನ್ನು ನಕಲಿ ದಾಖಲೆ ಮೂಲಕ ಲಪಾಟಯಿಸಲು ಶಿವರಾಮೇಗೌಡ ಹುನ್ನಾರ ನಡೆಸುತ್ತಿದ್ದಾನೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಸಿದ್ದಾಗ ಶಿವರಾಮೇಗೌಡ ಸೃಷ್ಟಿಸಿರುವ ಎಲ್ಲ ದಾಖಲೆಗಳು ನಕಲಿ ಎಂಬುದು ಸಾಬೀತಾಗಿದೆ ಎಂದು ಬಲಿಜ ಸಮುದಾಯದ ಮುಖಂಡ ಮತ್ತು ವಕೀಲ ಜಗದೀಶ್​ ಹೇಳಿದರು.

ಎಲ್​.ಆರ್​.ಶಿವರಾಮೇಗೌಡ, ಆತನ ಗುಂಡಾಗಳು, ಸಹಚರರು, ಬೌನ್ಸರ್​ಗಳು, ಗನ್​ಮ್ಯಾನ್​ಗಳು ನಿರಂತರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಖಾಲಿ ಜಾಗವನ್ನು ಅತಿಕ್ರಮಿಸಲು ಯತ್ನಿಸುತ್ತಿದ್ದಾರೆ. ಕಾನೂನು ಪ್ರಕಾರವೇ ಹೋರಾಟ ನಡೆಸುತ್ತಿದ್ದೇವೆ. ಸಮುದಾಯದ ಎಲ್ಲ ಜನರೂ ಒಗ್ಗಟ್ಟುನಿಂದ ಆತನ ವಿರುದ್ಧ ಕೆಚ್ಚದೆಯ ಹೋರಾಟ ನಡೆಸಬೇಕು.ಹೋರಾಟ ಮೂಲಕ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋಣ. ಯಾವುದೇ ಕಾರಣಕ್ಕೂ ಆನೇಕಲ್​ ತಿಮ್ಮಯ್ಯ ಚಾರಿಟಬಲ್​ ಟ್ರಸ್ಟ್​ಗೆ ಸೇರಿದ ಜಾಗವನ್ನು ಬಿಟ್ಟು ಕೊಡುವುದಿಲ್ಲ. ಪೊಲೀಸ್​ ಠಾಣೆಗೆ ಸಂಕ್ಷಿಪ್ತವಾಗಿ ದೂರನ್ನು ದಾಖಲಿಲಾಗುವುದು.

-ಕೂಚಣ್ಣ ಶ್ರೀನಿವಾಸನ್​, ಆನೇಕಲ್​ ತಿಮ್ಮಯ್ಯ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ.