ಜಿಲ್ಲೆ

ಪಯಸ್ವಿನಿ ನದಿ ಮೀನುಗಳಿಗೆ ಬಾಗಿನ ಸಮರ್ಪಣೆ

Avinash R

ಸುಳ್ಯ: ನಗರದ ಚೆನ್ನಕೇಶವ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಸುಳ್ಯದ ಜೀವನದಿ ಪಯಸ್ವಿನಿಯಲ್ಲಿ ದೇವರ ಮೀನುಗಳಿಗೆ ಬಾಗಿನ ಅರ್ಪಿಸುವ ಅಪರೂಪದ ಆಚರಣೆ ಆರಂಭಗೊಂಡಿದೆ.

ಪ್ರತಿ ವರ್ಷದ ಆಚರಣೆಯಂತೆ ಶ್ರಾವಣ ಮಾಸದ ಅಮಾವಾಸ್ಯೆ ದಿನ ಚೆನ್ನಕೇಶವ ದೇವಸ್ಥಾನ ಆನುವಂಶಿಕ ಆಡಳಿತ ಮುಖ್ಯಸ್ಥರು, ಬಲ್ಲಾಳರ ಪ್ರತಿನಿಧಿಗಳು ಮತ್ತು ಅರ್ಚಕರು ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬೂಡು ಶ್ರೀ ಭಗವತಿ ದೇವಸ್ಥಾನದಲ್ಲಿ ಹಾಗೂ ನಾಲ್ಕುಸ್ಥಾನ ದೈವಗಳ ಚಾವಡಿಯಲ್ಲಿ ಪ್ರಾರ್ಥನೆ ನೆರವೇರಿಸಿ ನದಿ ತಟಕ್ಕೆ ಬಂದು ಪೂಜೆ ಸಲ್ಲಿಸುವುದು ವಾಡಿಕೆ. ಈ ಧಾರ್ಮಿಕ ಕಾರ್ಯಕ್ರಮ ಯಥಾವತ್ತಾಗಿ ನಡೆದರೆ ಸರ್ವರಿಗೂ ಸುಭಿಕ್ಷವಾಗುತ್ತದೆ ಎಂಬುದು ಜನರ ನಂಬಿಕೆ.

ಅದರಂತೆ ಈ ಬಾರಿಯೂ ಚೆನ್ನಕೇಶವ ದೇವಸ್ಥಾನ ಅರ್ಚಕ ಹರಿಕೃಷ್ಣ ಭಟ್ ಕಾಯರ್ತೋಡಿ ಪೂಜಾ ಕೈಂಕರ್ಯ ನೆರವೇರಿಸಿದರು. ನದಿ ತಟದಲ್ಲಿ ದೀಪ ಸ್ವಸ್ತಿಕವಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಗಂಗಾ ವರುಣ ಪೂಜೆ ನಡೆಸಿ ನೈವೇದ್ಯ ತಯಾರಿಸಲಾಯಿತು. ಬಳಿಕ ಎಲ್ಲರೂ ತೀರ್ಥ ಸ್ನಾನ ಮಾಡಿ ಒಟ್ಟಾಗಿ ಪ್ರಾರ್ಥಿಸಿ ಅಕ್ಕಿ ಭತ್ತ ತೆಂಗಿನಕಾಯಿಯ ಹೋಳು ಬಾಳೆಹಣ್ಣು ಸೇರಿಸಿ ತಯಾರಿಸಿದ ನೈವೇದ್ಯ ಮತ್ತು ಹೂವು ಗಂಧದೊಂದಿಗೆ ದೇವರ ಮೀನುಗಳಿಗೆ ಅರ್ಪಿಸಲಾಯಿತು. ಸೀಮೆಯ ಮಲ್ಲಿಕಾರ್ಜುನ ದೇವಸ್ಥಾನದ ಮತ್ಸೃ ತೀರ್ಥದ ದೇವರ ಮೀನುಗಳು ಈ ನೈವೇದ್ಯ ಸ್ವೀಕರಿಸಲು ಇಲ್ಲಿಗೆ ಆಗಮಿಸುತ್ತವೆ ಎಂಬ ನಂಬಿಕೆ ಇದೆ.

ದೇವಸ್ಥಾನ ಆನುವಂಶಿಕ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ, ಬಳ್ಳಾಲ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ಪ್ರಮುಖರಾದ ಶಿವರಾಮ ಕೇರ್ಪಳ, ಸುನಿಲ್ ಕೇರ್ಪಳ, ಮಹಾಬಲ ರೈ, ಜನಾದರ್ನ ನಾಯ್ಕ ಕುಸುಮಾದರ ರೈ ಬೂಡು, ನಪಂ ಸದಸ್ಯೆ ಸುಶೀಲಾ ಜಿನ್ನಪ್ಪ ಕಲ್ಲುಮುಟ್ಲು, ನಾರಾಯಣಗೌಡ ಕಳಗಿ, ತಿರುಮಲೇಶ್ವರ ಕಲ್ಲುಮುಟ್ಲು, ವಿಜಯ್ ಕುಮಾರ್, ಚಂದ್ರಶೇಖರ ಕೇರ್ಪಳ, ಮೋನಪ್ಪ ಪೂಜಾರಿ, ಭಾಸ್ಕರ್ ರೈ, ತಿರುಮಲೇಶ್ವರ ಕಲ್ಲುಮುಟ್ಲು ಉಪಸ್ಥಿತರಿದ್ದರು.