ಲಿಂಗಸುಗೂರು: ಮಸ್ಕಿ ತಾಲೂಕಿನ ಬಗ್ಗಲಗುಡ್ಡ ಗ್ರಾಮದ ಸರ್ಕಾರಿ ಭೂಮಿ ಸಾಗುವಳಿ ಮಾಡುವ ರೈತರಿಗೆ ಉಳುಮೆ ಮಾಡಲು ಅವಕಾಶ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ನೇತೃತ್ವದಲ್ಲಿ ರೈತರು ಪಟ್ಟಣದ ಎಸಿ ಅವಿನಾಶ ಶಿಂಧೆಗೆ ಗುರುವಾರ ಮನವಿ ಸಲ್ಲಿಸಿದರು.
ಬಗ್ಗಲಗುಡ್ಡ ಗ್ರಾಮದ ಸರ್ವೆ ನಂ.28 ರ ಒಟ್ಟು 447 ಎಕರೆ ವಿಸ್ತೀರ್ಣ ಸರ್ಕಾರಿ ಭೂಮಿ ಇದೆ. ಈ ಪೈಕಿ 40 ಎಕರೆ ಭೂಮಿಯಲ್ಲಿ ಗ್ರಾಮದ ರೈತರಾದ ಹೇಮಪ್ಪ, ಶೆಟ್ಟೆಪ್ಪ, ಜಗನಪ್ಪ, ಸೋಮಲೆಪ್ಪ, ಡಾಕಪ್ಪ, ಉಮಲೆಮ್ಮ, ಕಮಲಮ್ಮ, ಶಂಕ್ರಪ್ಪ, ಚನ್ನಪ್ಪ, ರೇಖಪ್ಪ ಅವರು ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಕಂದಾಯ ಇಲಾಖೆ ಕೂಡಾ ಸಾಗುವಳಿ ಚೀಟಿ ನೀಡಿ ಆದೇಶ ಹೊರಡಿಸಿದೆ. ಆದರೂ ಅಧಿಕಾರಿಗಳು ಕೃಷಿ ಮಾಡಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂಮಿಗೆ ರೈತರು ಮುಟೇಷನ್ ಮಾಡಿಸಿಕೊಂಡಿಲ್ಲ. 1991 ರಲ್ಲಿ ಸರ್ಕಾರ ಭೂಮಿಯನ್ನು ರಿಜರ್ವ ಫಾರೆಸ್ಟ್ (ಕಾಯ್ದಿಟ್ಟ ಅರಣ್ಯ ಪ್ರದೇಶ) ಎಂದು ಘೋಷಣೆ ಮಾಡಿದೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಸಾಗುವಳಿ ಭೂಮಿಯನ್ನು ಹದು ್ದಬಸ್ತ್ ಮಾಡಿ ಇಲಾಖೆ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದು ರೈತರನ್ನು ಒಕ್ಕಲೆಬ್ಬಿಸುವ ತಂತ್ರವಾಗಿದೆ. ಕೂಡಲೇ ರೈತರಿಗೆ ಕೃಷಿ ಭೂಮಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.