ಬಾಗಲವಾಡದ ಮುಖ್ಯರಸ್ತೆಯಲ್ಲಿ ವಾಹನಗಳ ದಟ್ಟನೆ. 
ಜಿಲ್ಲೆ

ಬಾಗಲವಾಡ ಮುಖ್ಯರಸ್ತೆ ಧೂಳುಮಯ

ಕವಿತಾಳ: ಸಮೀಪದ ಬಾಗಲವಾಡ ಗ್ರಾಮದ ಮುಖ್ಯರಸ್ತೆ ಧೂಳಿನಿಂದ ಕೂಡಿದ್ದು, ವಾಹನಗಳು ಸಂಚರಿಸುತ್ತಿದ್ದಂತೆ ವ್ಯಾಪಾರಸ್ಥರು, ಪಾದಚಾರಿಗಳು ಮೂಗು ಮುಚ್ಚಿಕೊಳ್ಳಬೇಕಾಗಿದೆ. ಈ ಬಗ್ಗೆ ಗ್ರಾಪಂ ಕ್ರಮವಹಿಸದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಗಲವಾಡ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳ ಕೇಂದ್ರಸ್ಥಾನವಾಗಿದೆ. ಗ್ರಾಪಂ 28 ಸದಸ್ಯ ಬಲ ಹೊಂದಿದ್ದು, ಅತಿದೊಡ್ಡ ಪಂಚಾಯಿತಿ ಎನಿಸಿಕೊಂಡಿದೆ. ಅಲ್ಲದೆ ಇಲ್ಲಿ ವ್ಯಾಪಾರ-ವಹಿವಾಟು ಸಮೃದ್ಧವಾಗಿದೆ.

ಆದರೆ, ಕವಿತಾಳ, ಹಣಗಿ ಸಂಪರ್ಕಿಸುವ ರಸ್ತೆ, ಗ್ರಾಮದಲ್ಲಿ ಒಂದು ಕಿಮೀವರೆಗೆ ಧೂಳಿನಿಂದ ಕೂಡಿರುತ್ತದೆ. ರಸ್ತೆ ಪಕ್ಕದ ಮನೆ, ಹೋಟೆಲ್, ಅಂಗಡಿ ನಡೆಸುವವರಿಗೆ ತೊಂದರೆಯಾಗುತ್ತಿದ್ದು, ಆರೋಗ್ಯದ ಸಮಸ್ಯೆಗಳು ಕಾಡುತ್ತಿವೆ.

ಅಷ್ಟೇ ಅಲ್ಲದೆ ರಸ್ತೆಯಲ್ಲಿಯೇ ಬೇಕಾಬಿಟ್ಟಿ ವಾಹನಗಳ ನಿಲುಗಡೆಯಿಂದ ಸವಾರರು ಪರದಾಡುವಂತಾಗಿದೆ. ಪ್ರತಿದಿನ ಕೆಲಸಕ್ಕಾಗಿ ಬರುವ ಜನರಿಗೂ ಧೂಳಿನ ಅಭಿಷೇಕ ಸಾಮಾನ್ಯವಾಗಿದೆ. ಆದ್ದರಿಂದ ಸಂಬಂಧಪಟ್ಟವರು ರಸ್ತೆ ದುರಸ್ತಿ ಮಾಡಿ ಧೂಳು ಮುಕ್ತಗೊಳಿಸಬೇಕೆಂದು ಗ್ರಾಪಂ ಸದಸ್ಯ ಹುಸೇನಪ್ಪ, ಗ್ರಾಮಸ್ಥರಾದ ಬಸವರಾಜ ದ್ಯಾಮಣ್ಣ, ಮಲ್ಲಿಕಾರ್ಜುನ ಕರಿಗಾರ, ಗುರುಲಿಂಗಯ್ಯಸ್ವಾಮಿ, ಯಲ್ಲಪ್ಪ ಕಂಬಸ್ತಿ, ಕನಕಪ್ಪ ಒತ್ತಾಯಿಸಿದ್ದಾರೆ.

ಬಾಗಲವಾಡ ಗ್ರಾಮಸ್ಥ 

ಅಮರೇಶ ದೇಸಾಯಿ

ಬಾಗಲವಾಡ ಗ್ರಾಮದ ಮುಖ್ಯರಸ್ತೆ ಯಾವಾಗಲೂ ಧೂಳಿನಿಂದ ಕೂಡಿರುತ್ತದೆ. ಇದರಿಂದ ಜನರು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ರಸ್ತೆಯನ್ನು ಧೂಳು ಮುಕ್ತಗೊಳಿಸಲು ಕ್ರಮಕೈಗೊಳ್ಳಬೇಕು.

ಪಿಡಿಒ, ಬಾಗಲವಾಡ ಗ್ರಾಪಂ

ದೇವೇಂದ್ರಪ್ಪ

ಬಾಗಲವಾಡ ಮುಖ್ಯರಸ್ತೆಯಲ್ಲಿ ವಾಹನಗಳಿಂದ ಏಳುವ ಧೂಳಿನಿಂದ ಆಗುತ್ತಿರುವ ತೊಂದರೆ ಬಗ್ಗೆ ಸಾರ್ವಜನಿಕರು ಪಂಚಾಯಿತಿಗೆ ದೂರು ನೀಡಿದ್ದಾರೆ. ರಸ್ತೆ ಅಭಿವೃದ್ಧಿಗಾಗಿ ಸಿದ್ಧತೆ ನಡೆದಿದೆ. ವಾರದಲ್ಲಿ ಸಭೆ ಕರೆದು ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು.