ಬೆಂಗಳೂರು: ಡೀಸೆಲ್ ವಿದ್ಯುತ್ ಮತ್ತು ಟರ್ಬೋ ಜನರೇಟರ್ಗಳ ಅತಿ ಉಪಯೋಗದಿಂದ ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಇಂಡಿಯನ್ ಇನ್ಸ್ಸ್ಟಿಟ್ಯೂಷನ್ ಆಫ್ ಪ್ಲಾಂಟ್ ಇಂಜಿನಿಯರ್ಸ್ (ಐಐಪಿಇ) ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಎ.ಶಶಿ ಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ಪಿಸಿಬಿ) ಸಹಯೋಗದಲ್ಲಿ ಐಐಪಿಇ ಪರಿಸರ ಮಂಡಳಿಯಲ್ಲಿ ಗುರುವಾರ ಏರ್ಪಡಿಸಿದ್ದ "ಡೀಸಲ್ ಜನರೇಟರ್ ಮತ್ತು ಟಬೋರ್ ಜನರೇಟರ್ ಸೆಟ್ಗಳು, ಅದರ ನಿರ್ವಹಣೆಗೆ ಡಿಜಿಟಲ್ ಪರಿಹಾರಗಳು ಮತ್ತು ಜಾರಿ ಮಾಡುವ ವ್ಯವಸ್ಥೆ' ಕುರಿತು ಎರಡು ದಿನಗಳ ಕಾರ್ಯಗಾರದಲ್ಲಿ ಮಾತನಾಡಿದರು.
ಕಾರ್ಖಾನೆ, ಕೈಗಾರಿಕೆ ಸೇರಿದಂತೆ ವಿಶ್ವದಾದ್ಯಂತ ಡೀಸೆಲ್ ವಿದ್ಯುತ್ ತಯಾರಿಕಾ ಮತ್ತು ಟರ್ಬೋ ಜನರೇಟರ್ ಬಳಸಲಾಗುತ್ತಿದ್ದು, ಇವುಗಳಿಂದ ಹೊರಸೂಸುವ ಹೈಡ್ರೋಕಾರ್ಬನ್, ಇಂಗಾಲ ಬಿಡುಗಡೆಯಾಗುತ್ತಿವೆ. ಇದರಿಂದಾಗಿ ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮುಖ್ಯವಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ವಿವಿಧ ರೀತಿಯ ಕ್ಯಾನ್ಸರ್ಗೆ ಕಾರಣವಾಗುತ್ತಿದೆ. ಇದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಂತ್ರಗಳಿಂದ ಹೊರಸೂಸುವ ಇಂಗಾಲದಿಂದ ಪರಿಸರ ನಾಶವಾಗಲಿದೆ.ಅತಿವೃಷ್ಠಿ,ಅನಾವೃಷ್ಠಿ ಹೆಚ್ಚಾಗಿ ಪ್ರಪಂಚವನ್ನು ವಿನಾಶದತ್ತ ತಳ್ಳುತ್ತಿದೆ. ಯಂತ್ರಗಳಿಂದ ಆಗುವ ತೊಂದರೆ ತಡೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2023ರಲ್ಲಿ ಅಧಿಸೂಚನೆ ಹೊರಡಿಸಿದೆ. ಯಾವ ಪ್ರಮಾಣದಲ್ಲಿ ಡೀಸಲ್ ವಿದ್ಯುತ್ ತಯಾರಿಕಾ ಜನರೇಟರ್ ಉಪಯೋಗಿಸಬೇಕೆಂಬ ಮಾನದಂಡ ವಿಧಿಸಿದೆ. ಇದನ್ನು ಮೀರಿದರೆ ಶಿಕ್ಷೆ ನೀಡಲಾಗುತ್ತಿದೆ ಎಂದು ಶಶಿ ಶಂಕರ್ ವಿವರಿಸಿದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನ್ಯಾ.ಸುಭಾಷ್.ಬಿ.ಅಡಿ, ಕೆಎಸ್ಪಿಸಿಬಿ ಸದಸ್ಯ ಕಾರ್ಯದರ್ಶಿ ಎಚ್.ಸಿ. ಬಾಲಚಂದ್ರ, ಮಂಡಳಿಯ ಅಧಿಕಾರಿಗಳ ಮತ್ತಿತರರಿದ್ದರು.