ಬೆಂಗಳೂರು:ಹೊಸ ಕಾರ್ಡ್ಗಾಗಿ ಅರ್ಜಿದಾರರು 3 ವರ್ಷದಿಂದ ಜಾತಕಪಕ್ಷಿಯಂತೆ ಕಾಯುತ್ತಿರುವ ನಡುವೆಯೂ ಅರ್ಹತೆ ಹೊಂದಿಲ್ಲದ 46 ಮಂದಿಗೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಮಂಜೂರು ಮಾಡಿರುವುದು ಆಹಾರ ಇಲಾಖೆಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಆಹಾರ ಶಿರಸ್ತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ಜಿ. ತಿಮ್ಮಯ್ಯ ಎಂಬುವರು, ಲಂಚ ಪಡೆದು ವಿಶೇಷ “ವೈದ್ಯಕಿಯ ಕೇಸ್’ ವಿನಾಯಿತಿ ದುರ್ಬಳಕೆ ಮಾಡಿಕೊಂಡು ಅನಧಿಕೃತವಾಗಿ 46 ಬಿಪಿಎಲ್ ಚೀಟಿ ಕೊಟ್ಟಿರುವುದು ಚಿಕ್ಕಮಗಳೂರು ಜಿಲ್ಲಾಧಿಕಾರಿ, ಆಹಾರ ಇಲಾಖೆ ಆಯುಕ್ತರಿಗೆ ಕೊಟ್ಟಿರುವ ವರದಿಯಲ್ಲಿ ಬಹಿರಂಗವಾಗಿದೆ.
ರಾಜ್ಯ ಸರ್ಕಾರ ಹೊಸ ಪಡಿತರ ಚೀಟಿ ಮಂಜೂರು, ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೀಗಾಗಿ, ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಮೂರು ವರ್ಷದಿಂದ ಕಾಯುತ್ತಿರುವವರಿಗೆ ಹಾಗೂ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವವರಿಗೆ ತೀವ್ರ ನಿರಾಸೆಯಾಗಿದೆ. ಆದರೆ, ಕ್ಯಾನ್ಸರ್,ಕಿಡ್ನಿ,ಹೃದಯ ಸೇರಿ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸ ಬಿಪಿಎಲ್ ನೀಡುವಂತೆ ಆಹಾರ ಇಲಾಖೆಗೆ ಸರ್ಕಾರ ಅನುಮತಿ ಕೊಟ್ಟಿದೆ. ಹಾಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ 3 ವರ್ಷದ ಹಿಂದೆ ಸಲ್ಲಿಕೆಯಾದ ಅರ್ಜಿಗಳು ಮತ್ತು ಈಗ ಸಲ್ಲಿಸುವ ಅರ್ಜಿಯನ್ನು ವಿಶೇಷ “ವೈದ್ಯಕಿಯ ಕೇಸ್’ ಎಂದು ಪರಿಗಣಿಸಿ ಇಲಾಖೆಯಿಂದ ಬಿಪಿಎಲ್ ನೀಡಲಾಗುತ್ತಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಆಹಾರ ಶಿರಸ್ತುದಾರ, “ವೈದ್ಯಕಿಯ ಕೇಸ್’ ಅಡಿ ಸಲ್ಲಿಕೆಯಾಗಿರುವ 2 ಅರ್ಜಿಗಳಿಗೆ ಕಾರ್ಡ್ ನೀಡಬೇಕಿತ್ತು. ಆದರೆ, ಎರಡು ಕಾರ್ಡ್ ಬದಲಾಗಿ “ವೈದ್ಯಕಿಯ ಕೇಸ್’ ದುರ್ಬಳಕೆ ಮೂಲಕ 46 ಬಿಪಿಎಲ್ ಚೀಟಿಯನ್ನು ಲಾಗಿನ್ನಲ್ಲಿ ನೀಡಿರುವುದು ಕಂಡುಬಂದಿದೆ. ಕರ್ತವ್ಯದಲ್ಲಿ ಪದೇಪದೆ ಲೋಪವೆಸಗುತ್ತಿರುವುದು, ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ತಿದ್ದಿಕೊಂಡಿಲ್ಲ. ಹಾಗಾಗಿ, ಕರ್ನಾಟಕ ರಾಜ್ಯ ನಾಗರಿಕ ಸೇವಾ( ನಡತೆ) ನಿಯಮ ಅನ್ವಯ ಈ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಇಲಾಖೆಗೆ ಜಿಲ್ಲಾಧಿಕಾರಿ ಕೋರಿದ್ದಾರೆ.
ಮುಂದಿನ 4 ದಿನ ಕರಾವಳಿ, ಉ.ಕ.ದಲ್ಲಿ ಮಳೆ
ಗಂಭೀರ ಕಾಯಿಲೆಯವರಿಗೆ ಸಿಗುತ್ತೆ ಕಾರ್ಡ್
ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಅರ್ಜಿ ಸಲ್ಲಿಸಿದರೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್ ಸಿಗಲಿದೆ. ಆಧಾರ್ ಕಾರ್ಡ್, ಆದಾಯ ದೃಢೀಕರಣ ಪತ್ರ, ಮನೆ ಬಾಡಿಗೆ ದಾಖಲೆ ಜತೆಗೆ ಕಡ್ಡಾಯವಾಗಿ ವೈದ್ಯರಿಂದ ಆರೋಗ್ಯ ಸಂಬಂಧಿಸಿದ ಪ್ರಮಾಣಪತ್ರ ಸಲ್ಲಿಸಿ ಆಹಾರ ನಿರೀಕ್ಷಕ ಗಮನಕ್ಕೆ ತರಬೇಕು. ಬಳಿಕ, ಎಲ್ಲ ದಾಖಲೆ ಪರಿಶೀಲಿಸಿದ ಬಳಿಕ ಆಹಾರ ನಿರೀಕ್ಷಕ, ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ನಂತರ, ಆರೋಗ್ಯ ಉದ್ದೇಶಕ್ಕೋ ಅಥವಾ ಇನ್ಯಾವುದಕ್ಕೂ ಎಂಬುದರ ಬಗ್ಗೆ ಪರಿಶೀಲಿಸಲು ರೋಗಿ ಮನೆಗೆ ಭೇಟಿ ನೀಡುತ್ತಾರೆ. ಆರೋಗ್ಯ ಸಮಸ್ಯೆಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಅರ್ಜಿ ಅನುಮೋದನೆಗೆ ಉಪನಿರ್ದೇಶಕರಿಗೆ ಕಳುಹಿಸುತ್ತಾರೆ. ಅಂತಿಮವಾಗಿ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿ ಪಡೆದು ಕಾರ್ಡ್ ನೀಡುತ್ತಾರೆ.