ಬೆಂಗಳೂರು: ನೈಋತ್ಯ ಮಾನ್ಸೂನ್ ಪ್ರವೇಶಿಸಿದ ಬೆನ್ನಲ್ಲೇ ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾನುವಾರವೂ ಧಾರಾಕಾರವಾಗಿ ಮಳೆಯಾಗುತ್ತಿದೆ. ಆ ಭಾಗದ ಕೆಲ ಜಿಲ್ಲೆಗಳಲ್ಲಿ 100 ಮಿಮೀಗೂ ಅಧಿಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಮುದ್ರದಲ್ಲಿ ರಕ್ಕಸ ಅಲೆಗಳ ಅಬ್ಬರಕ್ಕೆ ಮೀನುಗಾರರು ದಡ ಸೇರುವಂತಾಗಿದೆ. ಮಳೆ ಸಂಬಂಧಿಸಿದ ಅವಡಗಳು ಕೆಲವೆಡೆ ನಡೆದಿವೆ.
ನಿರಂತರ ಮಳೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 8-9 ಡಿ.ಸೆ. ಉಷ್ಣಾಂಶ ಕುಸಿತವಾಗಿದೆ. ವಿಜಯಪುರ, ಕಲಬುರಗಿ, ಚಿತ್ರದುರ್ಗ, ಧಾರವಾಡ, ಗದಗ, ಬೀದರ್,ಬೆಳಗಾವಿ, ಬಾಗಲಕೋಟೆಯಲ್ಲಿ ಮೈಸೂರು, ರಾಯಚೂರು, ಮಂಗಳೂರಿನಲ್ಲಿ 7-8 ಡಿ.ಸೆ. ಉಷ್ಣಾಂಶ ಇಳಿಕೆಯಾಗಿದೆ. ಕೆಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಶೀತ ಗಾಳಿ ಬೀಸುತ್ತಿದೆ. ಮುಂಚಿತವಾಗಿ ಮುಂಗಾರು ಪ್ರವೇಶಿಸಿದ ಪರಿಣಾಮ ವಾಡಿಕೆಗಿಂತ ಮುನ್ನವೇ ಈ ಬಾರಿ ಬೇಸಿಗೆ ಮುಗಿದಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಮೇ 26ರಿಂದ ಮೇ 28ರವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಎಚ್ಚರಿಕೆ ಕೊಟ್ಟಿದೆ. ಈ ಅವಧಿಯಲ್ಲಿ 204 ಮಿಮೀವರೆಗೆ ಮಳೆಯಾಗುವ ಸಂಭವ ಇದೆ.ಬೆಳಗಾವಿ, ಧಾರವಾಡದಲ್ಲಿಯೂ ರಭಸವಾಗಿ ಮಳೆಯಾಗುವ ಕಾರಣ ಮೇ 27ರಿಂದ ಮುಂದಿನ 2 ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.
ಗದಗ,ಹಾವೇರಿ, ಹಾಸನ, ಮೈಸೂರಿನಲ್ಲಿ ಮುಂದಿನ ಮೂರು ದಿನ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಹಲವು ಜಿಲ್ಲೆಗಳಲ್ಲಿ ಮೇ 29ರಿಂದ ಇನ್ನಷ್ಟು ಜೋರಾಗಿ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಗಾಳಿಯ ವೇಗ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.