ಜಿಲ್ಲೆ

ಸಾಕು ನಾಯಿಗೆ ಅದ್ಧೂರಿ ಸೀಮಂತ ಕಾರ್ಯ: ಅರಿಶಿಣ, ಕುಂಕುಮ ಇಟ್ಟು ಆರತಿ ಬೆಳಗಿದ ಮಹಿಳೆಯರು!

ಚಿತ್ರದುರ್ಗ: ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾವು ಸಾಕಿದ ಶ್ವಾನಕ್ಕೆ ಸೀಮಂತ ಮಾಡಿ ಪ್ರಾಣಿ ಪ್ರೇಮ ಮೆರದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ವ್ಯಕ್ತಿಯೊಬ್ಬರು ಪ್ರೀತಿಯಿಂದ ಸಾಕಿದ ನಾಯಿಗೆ ಅದ್ಧೂರಿ ಸೀಮಂತ ಕಾರ್ಯ ಮಾಡಿ ಶ್ವಾನಪ್ರಿಯರ ಗಮನ ಸೆಳೆದಿದ್ದಾರೆ. ಅಜಯ್ ಹಾಗೂ ಸಹೋದರಿ ಜ್ಯೋತಿ ಮುದ್ದಿನ ನಾಯಿಗೆ ಸೀಮಂತ ಕಾರ್ಯಕ್ರಮ ನಡೆಸಿದವರು.

ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವಂತೆ ಕುಂಕಮವನ್ನು ಇಟ್ಟು ವಿಶೇಷವಾಗಿ ಅದಕ್ಕೆ ಇಷ್ಟವಾದ ತಿಂಡಿಯನ್ನೇ ಇಟ್ಟು, ಶಾಸ್ರೋಕ್ತವಾಗಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ.

13 ತಿಂಗಳ‌ ವಯಸ್ಸಿನ ರೂಬಿ ಈಗ 2 ತಿಂಗಳ ಗರ್ಭಿಣಿ. ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಿದ್ದ ಕುಟುಂಬ. ಇದೀಗ ಮುದ್ದಿನ ಶ್ವಾನ ಗರ್ಭಿಣಿಯೆಂಬುದು ತಿಳಿದ ಬಳಿಕ ಸಂತೋಷಗೊಂಡಿರುವ ಕುಟುಂಬ, ಅಕ್ಕಪಕ್ಕದ ಮನೆಯವರನ್ನು ಕರೆದು ಸೀಮಂತ ಕಾರ್ಯ ಮಾಡಿದ್ದಾರೆ.

ಸದ್ಯ ಸೀಮಂತ ಕಾರ್ಯ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಡೆ ವೈರಲ್ ಆಗುತ್ತಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.