ಜಿಲ್ಲೆ

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಅರೆಸ್ಟ್!

ಬೆಂಗಳೂರು: ಸಚಿವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿರುವ ಆರೋಪದ ಮೇಲೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ (ಪಿಎ)ನನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ.

ಶ್ರೀರಾಮುಲು ಪಿಎ ರಾಜು ವಿರುದ್ದ ಸಿಸಿಬಿಗೆ ಹಲವಾರು ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ಸಿಸಿಬಿ ಅಧಿಕಾರಿಗಳು ಸಚಿವರ ಪಿಎ ಅನ್ನು ಬಂಧಿಸಿದ್ದಾರೆ. ವಂಚನೆ ಸಂಬಂಧಿಸಿದ ಸಾಕ್ಷಿಗಳನ್ನು ಸಹ ಅಧಿಕಾರಿಗಳು ಕಲೆ ಹಾಕಿದ್ದರು.

ತಮ್ಮ ಹೆಸರು ದುರ್ಬಳಕೆ ಮಾಡುತ್ತಿರುವುದಾಗಿ ಸಿಎಂ ಪುತ್ರ ವಿಜಯೇಂದ್ರ ಅವರು ಸಿಸಿಬಿಗೆ ದೂರು ನೀಡಿದ್ದರು. ಅವರ ದೂರಿನ್ವಯ ಎಫ್​ಐಆರ್​ ದಾಖಲಿಸಲಾಗಿತ್ತು. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲೂ ಎಫ್​ಐಆರ್​ ದಾಖಲಾಗಿತ್ತು.

ನನ್ನ ಹೆಸರು ಹೇಳಿಕೊಂಡು ಕೆಲಸ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಲವು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ವಿಜಯೇಂದ್ರ ಉಲ್ಲೇಖಿಸಿದ್ದಾರೆ. ವಿಧಾನಸೌಧ, ಶಾಸಕರ ಭವನ, ಸಿಎಂ ಮನೆ ಬಳಿ ಬರುತ್ತಿದ್ದ ಸಾರ್ವಜನಿಕರು ಹಾಗೂ ಉದ್ಯಮಿಗಳಿಗೂ ಮೋಸ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ವಿಜಯೇಂದ್ರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜು ಅಲಿಯಾಸ್ ರಾಜಣ್ಣನನ್ನು ಇಂದು ಸಂಜೆ ಸಚಿವ ಶ್ರೀರಾಮುಲು ಮನೆಯ ಬಳಿ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಲವು ವರ್ಷಗಳಿಂದ‌ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜತೆ ರಾಜು ಗುರುತಿಸಿಕೊಂಡಿದ್ದ.