ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಚಂದ್ರಶೇಖರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
'ನಿಮಗೆ ಜೆಡಿಎಸ್ ಪಕ್ಷವು ರಾಜ್ಯಮಟ್ಟದಲ್ಲಿ ಹಲವು ಅವಕಾಶ ಕಲ್ಪಿಸಿದೆ. ಪಕ್ಷದಿಂದ ಸಾಕಷ್ಟು ಅನುಕೂಲ ಪಡೆದಿದ್ದರೂ ಈ ಸ್ಥಾನಗಳನ್ನು ದುರುಪಯೋಗ ಪಡಿಸಿಕೊಂಡು ನಿರಂತರವಾಗಿ ಪಕ್ಷ ಹಾಗೂ ಪಕ್ಷದ ವರಿಷ್ಠರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿಕೊಂಡು ಬಂದಿದ್ದೀರಿ. ಹಾಗಾಗಿ ನಿಮ್ಮನ್ನು ಪಕ್ಷದಿಂದ 6 ವರ್ಷ ಕಾಲ ಉಚ್ಛಾಟನೆ ಮಾಡಲಾಗಿದೆ' ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್, ಆದೇಶ ಮೂಲಕ ಚಂದ್ರಶೇಖರ್ಗೆ ತಿಳಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸೂಚನೆ ಹಿನ್ನೆಲೆ ಚಂದ್ರಶೇಖರ್ರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದರ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಬಿ.ಎಚ್.ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಆರ್ಆರ್ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣಾ ಸಮರ ಜೋರಾಗಿದ್ದು, ಪಕ್ಷಾಂತರ ಪರ್ವ ಕೂಡ ಬಿರುಸುಗೊಂಡಿದೆ. ಜೆಡಿಎಸ್ನಿಂದ ಹೊರ ಹೋಗುವವರಿಗೆ ಶಾಲು-ಹಾರ ಹಾಕಿ ಇತ್ತೀಚಿಗಷ್ಟೇ ಮಾಜಿ ಸಿಎಂಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಇದೀಗ ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ.