ಮೂಲ್ಕಿ: ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯ ನೀಡುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಸಹಕರಿಸಬೇಕು ಎಂದು ನಗರ ಪಂಚಾಯಿತಿ ಮುಖ್ಯ ಅಧಿಕಾರಿ ಮಧುಕರ್ ಹೇಳಿದರು.
ಕಾರ್ನಾಡ್ ಹಾಗೂ ಮೂಲ್ಕಿ ಬಸ್ ನಿಲ್ದಾಣದ ಬಳಿ ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ್ ಮಿಷನ್ 2(ನಗರ) ಯೋಜನೆ ಮಾಹಿತಿ ಶಿಕ್ಷಣ ಮತ್ತು ಸಂವಹನ ಘಟಕದಡಿ ಘನ ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಬಳಸಿದ ನೀರು ನಿರ್ವಹಣೆ ಕುರಿತು, ಪ್ರದರ್ಶನ ಬೀದಿ ನಾಟಕ, ಸಾರ್ವಜನಿಕ ಮೇಳ, ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಉದ್ಘಾಟಿಸಿದರು. ಸಾಹಸ್ ಎನ್‌ಜಿಒ ಅಧಿಕಾರಿ ವಿಶಾಲ್ ಮಾತನಾಡಿ, ಪ್ಲಾಸ್ಟಿಕ್ ನಿರ್ಮೂಲನೆ ವ್ಯವಸ್ಥೆ ಜನರಿಂದಲೇ ಆರಂಭಗೊಳ್ಳಬೇಕು. ನಾಗರಿಕರು ಸಂತೆಗೆ, ಪೇಟೆಗೆ ಬರುವಾಗ ಬಟ್ಟೆ ಚೀಲ ತೆಗೆದುಕೊಂಡು ಬನ್ನಿ ಎಂದರು.
ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತುಭಾವ, ದಯಾವತಿ ಅಂಚನ್, ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್ ಸಂಸ್ಥೆ ಆಡಳಿತ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮೌನೇಶ್ ವಿಶ್ವಕರ್ಮ ನೇತೃತ್ವದಲ್ಲಿ ಘನ ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಬೀದಿ ನಾಟಕ ನಡೆಯಿತು.