ಬೆಂಗಳೂರು:ಭಾರತೀಯ ಮಾನಕ ಬ್ಯುರೋ (ಬಿಐಎಸ್) ಬೆಂಗಳೂರು ಶಾಖೆ, ದಾಸರಹಳ್ಳಿಯಲ್ಲಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ "ಮಾನಕ್ ಕಾರ್ನಿವಲ್'ನಲ್ಲಿ ಗುಣಮಟ್ಟ ಮಾನದಂಡಗಳ ಬಗ್ಗೆ ಅರಿವು ಮೂಡಿಸಲಾಯಿತು.
ಶಾಸಕ ಮುನಿರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 6 ಪ್ರತಿಷ್ಠಿತ ಶಾಲೆಗಳು ಮತ್ತು ಪಿಯು ಕಾಲೇಜುಗಳಿಂದ ಅಂದಾಜು 350 ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮವು ಗುಣಮಟ್ಟ ಮಾನದಂಡಗಳ ಬಗ್ಗೆ ಅರಿವು ಮೂಡಿಸುವುದು, ಯುವ ಜನಾಂಗದಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆ ಬೆಳೆಸುವ ಗುರಿ ಹೊಂದಿತ್ತು. ಗಾಳಿಪಟ ಅಲಂಕಾರ, ಬಿಐಎಸ್ ಗುಣಮಟ್ಟ, ಮಾನದಂಡಗಳ ಕುರಿತು 2 ನಿಮಿಷಗಳ ಭಾಷಣ ಮತ್ತು ರಸಪ್ರಶ್ನೆ ಸೇರಿ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.
ದಾಸರಹಳ್ಳಿಯ ಸರ್ಕಾರಿ ಪಿಯು ಕಾಲೇಜುಗೆ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿ ಲಭಿಸಿತ್ತು. ಎನ್ಎಂಎಚ್ ಗ್ಲೋಬಲ್ ಶಾಲೆ ಮತ್ತು ಪಿಎಂಶ್ರೀ ಕೇಂದ್ರಿಯ ವಿದ್ಯಾಲಯ ಸಿಆರ್ಪಿಎಫ್ ಯಲಹಂಕ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದವು. ಐಎಸ್ಐ ಗುರುತಿನ ಉತ್ಪನ್ನಗಳು, ವಿದ್ಯಾರ್ಥಿಗಳು ತಯಾರಿಸಿದ ಪೋಸ್ಟರ್ಗಳು, ತಂತ್ರಜ್ಞಾನ ಮತ್ತು ಸೃಜನಶೀಲತೆಯಲ್ಲಿ ಗುಣಮಟ್ಟದ ಮಾನದಂಡಗಳ ಮಹತ್ವವನ್ನು ಪ್ರದರ್ಶಿಸಲಾಯಿತು.
ಐಐಟಿಯ ಮಾಜಿ ಪ್ರಾಧ್ಯಾಪಕ ಬ್ರಿಜ್ ಕೆ.ದಿಂಡಾವ್, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ವಾಣಿಶ್ರೀ, ಬಿಐಎಸ್ ಬೆಂಗಳೂರು ಶಾಖೆ ಮುಖ್ಯಸ್ಥ ಕೆ.ವಿಜಯವೀರನ್, ನಿರ್ದೇಶಕ ನರೇಂದರ್ ರೆಡ್ಡಿ ಬೀಸು ಮತ್ತು ಯೋಗ ತರಬೇತುದಾರ ಎಸ್.ಮಂಜುನಾಥ್ ಮತ್ತಿತರರಿದ್ದರು.