ಕೋಟ: ಪೊಲೀಸ್ ಠಾಣೆ ವ್ಯಾಪ್ತಿಯ ಕೋಟ ಮಣೂರು ಕರಿಕಲ್ ಕಟ್ಟೆ ಬಳಿಯ ಕವಿತಾ ಸುಧೀರ್ ಮನೆಯೊಂದಕ್ಕೆ ನುಗ್ಗಿ ದರೋಡೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ನಿವಾಸಿ, ಚಿಕ್ಕಮಗಳೂರಿನ ಸಂತೋಷ್ ನಾಯಕ್(45) ಮತ್ತು ಕಾಪು ಪೊಲಿಪು ನಿವಾಸಿ ದೇವರಾಜ್ ಸುಂದರ್ ಮೆಂಡನ್(46) ಬಂಧಿತರು.
ಜುಲೈ 25ರಂದು ಮಣೂರಿನ ಕವಿತಾರವರ ಎಂಬುವರ ಮನೆಗೆ ನಕಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಕಾರಿನಲ್ಲಿ ಐಟಿ ಇಲಾಖೆಯವರಂತೆ ಆಗಮಿಸಿದ ಸುಮಾರು 6-8 ಜನ ಅಪರಿಚಿತರು ಮನೆಗೆ ಅಕ್ರಮ ಪ್ರವೇಶಗೈದು ದಾಳಿಗೆ ಯತ್ನಿಸಿದ್ದರು. ಆರೋಪಿಗಳ ಪತ್ತೆಗೆ ಕೋಟ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ ಹಾಗೂ ಸುಧಾಪ್ರಭು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐ ಮಂಜುನಾಥರವರನ್ನು ಒಳಗೊಂಡ ಪ್ರತ್ಯೇಕ 3 ತಂಡ ರಚಿಸಲಾಗಿತ್ತು. ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಿ, ಉಳಿದ ಆರೋಪಿತರ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿತರು ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡುವ ಸಂಚು ರೂಪಿಸಿ ಮಹಾರಾಷ್ಟ್ರದಿಂದ ಬಂದಿದ್ದು, ಇದಕ್ಕೆ ಜಿಲ್ಲೆಯ ಸ್ಥಳಿಯ ಆರೋಪಿತರೂ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.