ಕಡಬ: ಕೊೈಲ ಗ್ರಾಮದ ಪಶು ಸಂಗೋಪನ ಇಲಾಖೆಗೆ ಸೇರಿದ ಕೊಲ ಜಾನುವಾರು ತಳಿ ಸಂವರ್ಧನ ಕೇಂದ್ರದ ವಿಶಾಲವಾದ ಹಚ್ಚ ಹಸುರಿನ ಹುಲ್ಲುಗಾವಲಿನ ಪ್ರದೇಶಕ್ಕೆ ಪ್ರವೇಶ ನಿರ್ಬಂದಿಸಿದ್ದರೂ ರೀಲ್ಸ್‌ಗಾಗಿ ಲಾರಿ ಡ್ರಿಫ್ಟಿಂಗ್ ನಡೆಸಿದ್ದು ಪ್ರಶ್ನಿಸಲು ಹೋದವರಿಗೆ ಧಮ್ಕಿ ಹಾಕಿ ಹಲ್ಲೆಗೆ ಮುಂದಾದ ಘಟನೆ ಬುಧವಾರ ನಡೆದಿದೆ.
ಹಸಿರು ಹುಲ್ಲಿನಿಂದ ಆವೃತವಾಗಿರುವ ಗುಡ್ಡದಲ್ಲಿ ಭಾರಿ ವಾಹನ ಕಂಡು ಸ್ಥಳೀಯ ರಿಕ್ಷಾ ಚಾಲಕರು ಪ್ರಶ್ನಿಸಿದ್ದಾರೆ. ಗೋವುಗಳು ಮೇಯುವ ಜಾಗದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ರಿಕ್ಷಾ ಚಾಲಕರು ತಿಳಿಸಿದ್ದಾರೆ. ಈ ವೇಳೆ ತಾವು ಮಾಡಿದ್ದು ತಪ್ಪು ಎಂದು ಹೇಳಿಕೊಂಡು ಅಲ್ಲಿಂದ ಲಾರಿ ಚಾಲಕ ಮತ್ತು ಇತರರು ತೆರಳಿದ್ದಾರೆ. ಆ ಬಳಿಕದ ಬೆಳವಣಿಗೆಯಲ್ಲಿ ರಿಕ್ಷಾ ನಿಲ್ದಾಣಕ್ಕೆ ಬಂದ ಕೆಲ ಯುವಕರು ರಿಕ್ಷಾ ಚಾಲಕರಿಗೆ ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ರಿಕ್ಷಾ ಚಾಲಕರು ನೀಡಿದ ದೂರಿನ ಮೇರೆಗೆ ಧಮ್ಕಿ ಹಾಕಿದ್ದರೆನ್ನಲಾದ ಯುವಕರನ್ನು ಠಾಣೆಗೆ ಕೆರೆಸಿ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.