ಉಪ್ಪಿನಂಗಡಿ: ಬಾರ್ಯ ಮೂರುಗೋಳಿ ಎಂಬಲ್ಲಿ ವಕ್ರಾಂಗಿ ಸಂಸ್ಥೆಯಲ್ಲಿರುವ ಎಟಿಎಂಗೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಹಮ್ಮದ್ ಹರ್ಷದ್ ಎಂಬುವರು ನಿರ್ವಹಿಸುತ್ತಿರುವ ಈ ಎಟಿಎಂ ಕೇಂದ್ರಕ್ಕೆ ಸೋಮವಾರ ತಡ ರಾತ್ರಿ 1.30ರ ಸುಮಾರಿಗೆ ಒಳ ನುಗ್ಗಿದ ಕಳ್ಳರು ಮುಖಗವಸು ಧರಿಸಿ, ಕೈಗೆ ಗ್ಲೌಸ್ ಹಾಕಿ ಎಟಿಎಂ ಮಷಿನ್‌ನ ಒಂದು ಬಾಗಿಲನ್ನು ಮುರಿದು ಎರಡನೇ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ. ಎರಡನೇ ಬಾಗಿಲು ಪಾಸ್‌ವರ್ಡ್ ಆಧಾರಿತ ಚಾಲನೆಗೊಳ್ಳುವ ವ್ಯವಸ್ಥೆ ಹೊಂದಿರುವುದರಿಂದ ಪಾಸ್‌ವರ್ಡ್ ಲಭಿಸದೆ ನಗದು ಇರುವ ಕೋಶದ ಬಾಗಿಲು ತೆರೆಯಲು ವಿಫಲವಾದ ದೃಶ್ಯ ಸಿಸಿ ಕ್ಯಾಮರದಲ್ಲಿ ಕಂಡು ಬಂದಿದೆ. ಎಟಿಎಂನಲ್ಲಿದ್ದ 3.20 ಲಕ್ಷಕ್ಕೂ ಮಿಗಿಲಾದ ಮೊತ್ತ ಕಳ್ಳರ ಪಾಲಾಗಿದೆಯೋ ಅಥವಾ ಸುರಕ್ಷಿತವಾಗಿದೆಯೋ ಎನ್ನುವುದು ಎಟಿಎಂ ಮಷಿನ್ ತೆರೆಯುವ ತಂತ್ರಜ್ಞರ ಆಗಮನದ ಬಳಿಕ ತಿಳಿಯಬೇಕಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.