ಕಾಸರಗೋಡು: ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದಾತನನ್ನು ಪೊಲೀಸರು ಬಂಧಿಸಿದ್ದಾರೆ.
ವೆಳ್ಳರಿಕುಂಡು ಠಾಣೆ ವ್ಯಾಫ್ತಿಯ ಬಳಾಲ್ ಮಂಗಯಂ ನಡುತ್ತೋಡು ನಿವಾಸಿ ಅರ್ಜುನನ್ ತಿಲಕ್ ಬಂಧಿತ. ಅಪಘಾತದ ಸಂದರ್ಭ ಆರೋಪಿ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದೆ. ಈತ ಚಲಾಯಿಸುತ್ತಿದ್ದ ಕಾರು ಗುರುವಾರ ಮಧ್ಯರಾತ್ರಿ ಮಂಗಯಂ ಬಳಿ ಚರಂಡಿಗೆ ಪಲ್ಟಿಯಾಗಿತ್ತು. ಮಾಹಿತಿ ಪಡೆದು ನೈಟ್ ಪೆಟ್ರೋಲಿಂಗ್‌ನಲ್ಲಿದ್ದ ಎಎಸ್‌ಐ ಟಿ.ಮಧುರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಿಮಿಸಿದ್ದು, ಈ ಸಂದರ್ಭ ಕಾರಿನೊಳಗೆ ಮದ್ಯದ ಅಮಲಿನಲ್ಲಿದ್ದ ಆರೋಪಿ ಪೊಲೀಸರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಲಾರಂಭಿಸಿದ್ದ. ನಂತರ ಇನ್‌ಸ್ಪೆಕ್ಟರ್ ಕೆ.ಪಿ.ಸತೀಶ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಆತನನ್ನು ಕಾರಿನೊಳಗಿಂದ ಬಲವಂತವಾಗಿ ಹೊರಕ್ಕೆ ತರುತ್ತಿದ್ದಂತೆ ಇವರ ಮೇಲೆರಗಲು ಯತ್ನಿಸಿ, ಕೈಯಲ್ಲಿದ್ದ ಬೀಗದಿಂದ ಚುಚ್ಚಿ ಗಾಯಗೊಳಿಸಿದ್ದಾನೆ. ಗಾಯಾಳು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.