ಜಿಲ್ಲೆ

ಶೂ ಧರಿಸಿ ಶಾಲೆಗೆ ಬಂದಾತಗೆ ಹಿರಿಯ ವಿದ್ಯಾರ್ಥಿಗಳಿಂದ ಹಲ್ಲೆ

ಸೌಮ್ಯ ಆರ್

ಕಾಸರಗೋಡು: ಶೂ ಧರಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳ ತಂಡವೊಂದು ಥಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ತಾರಿಯಲ್ಲಿ ನಡೆದಿದೆ.

ಪ್ಲಸ್‌ವನ್ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ, ಶೂ ಧರಿಸಿ ಶಾಲೆಗೆ ಆಗಮಿಸುತ್ತಿದ್ದಂತೆ ಹಿರಿಯ ವಿದ್ಯಾರ್ಥಿಗಳ ತಂಡ ಆತನನ್ನು ಕೊಠಡಿಗೆ ಕರೆದೊಯ್ದು ಡ್ರಿಲ್ ಮಾಡಲು ಆರಂಭಿಸಿದೆ. ವಿದ್ಯಾರ್ಥಿ ತಲೆಗೂದಲು ಹಿಡಿದು ಮುಖಕ್ಕೆ ಬಡಿಯುವುದು, ಥಳಿಸುವ ದೃಶ್ಯಗಳು ಕೆಲವೊಂದು ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಥಳಿಸಿರುವ ವಿಷಯವನ್ನು ಶಾಲೆ ಅಥವಾ ಮನೆಯವರಲ್ಲಿ ತಿಳಿಸಿದಲ್ಲಿ ಇದಕ್ಕಿಂತ ಹೆಚ್ಚಿನ ಹಲ್ಲೆ ಎದುರಿಸಬೇಕಾದೀತು ಎಂದು ತಂಡ ಬೆದರಿಸಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬಾಯಿ ಬಿಟ್ಟಿರಲಿಲ್ಲ. ಮೊಬೈಲ್‌ಗಳಲ್ಲಿ ದೃಶ್ಯ ಹರಿದಾಡುತ್ತಿರುವುದು ವಿದ್ಯಾರ್ಥಿಯ ಪಾಲಕರ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದಾಗ ಹಿರಿಯ ವಿದ್ಯಾರ್ಥಿಗಳ ಕ್ರೂರತನ ಬಹಿರಂಗಗೊಂಡಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.