

ನರೇಂದ್ರ ಎಸ್.ಮರಸಣಿಗೆ
ಮುಂಗಾರು ಮಳೆ ಉತ್ತಮವಾಗಿ ಸುರಿಯುತಿದ್ದು, ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಸಜ್ಜಾಗಿದೆ. ಈ ಬಾರಿ ಕುಂದಾಪುರ ವಲಯದ ವತಿಯಿಂದ 3,80,000 ಗಿಡಗಳು ನಾಟಿಗೆ ತಯಾರಾಗಿದೆ. ಹೆಬ್ರಿ ಪ್ರಾದೇಶಿಕ ಅರಣ್ಯ ಗಿಡಗಳನ್ನು ನೆಡಲಾಗಿದೆ. ಸರ್ಕಾರಿ ಕಚೇರಿ, ಸರ್ಕಾರಿ ಜಾಗ, ರಾಷ್ಟ್ರೀಯ ಹೆದ್ದಾರಿ ಸಾಗುವ ರಸ್ತೆ ಇಕ್ಕೆಲ, ಮಡಾಮಕ್ಕಿ, ಕುಚ್ಚೂರು ಬೆಳ್ವೆ ರಾಜ್ಯ ಹೆದ್ದಾರಿ, ಜಿಪಂ ರಸ್ತೆ, ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆಗಳ ಪಕ್ಕದಲ್ಲಿ ಗಿಡ ನೆಡಲು ಯೋಜನೆ ರೂಪಿಸಲಾಗಿದೆ. 4000 ಗಿಡಗಳನ್ನು ಅರಣ್ಯ ಇಲಾಖೆ ನೆಟ್ಟಿದ್ದು, ಉಳಿದ 6000 ಗಿಡ ಸಾರ್ವಜನಿಕ ವಿತರಣೆಗೆ ವಿತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಬೈಂದೂರು 46320, ಕುಂದಾಪುರ 40720, ಶಂಕರನಾರಾಯಣ 68466, ಉಡುಪಿ 42240, ಹೆಬ್ರಿ 16100, ಕಾರ್ಕಳ 79489, ಮೂಡುಬಿದಿರೆ 59124, ವೇಣೂರು 26840 ವಲಯದಲ್ಲಿ 79299 ಸಸಿ ಬೆಳೆಯಲಾಗಿದೆ.
ಮಂಗಗಳು ಹಾಗೂ ಇತರ ಪ್ರಾಣಿಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ರುಚಿಗೆ ಹೊಂದಿಕೊಂಡಂತೆ ತಾರೆ ಹಣ್ಣು, ಕಾಯಿದೂಪ, ಪೇರಳೆ, ಮಾವು, ಹಲಸು, ಹೆಬ್ಬಲಸು, ಹತ್ತಿ, ನೆಲ್ಲಿಕಾಯಿ, ನೇರಳೆ ಹಣ್ಣುಗಳ ಗಿಡ ನಾಟಿ ಮಾಡಲಾಗಿದೆ. ನಾಡಿಗೆ ಬರುವ ಮಂಗಗಳ ಹಾವಳಿ ಕೂಡ ಇದರಿಂದ ತಡೆಯಬಹುದು.ವಿವಿಧ ಜಾತಿಯ ಸಸಿಗಳು ಸಾರ್ವಜನಿಕರಿಗೆ, ರೈತರಿಗೆ ಸರ್ಕಾರದ ರಿಯಾಯಿತಿ ದರ 3 ಮತ್ತು 6 ರೂ.ಗಳಲ್ಲಿ ಮಾರಾಟಕ್ಕೆ ಮಾಡಲಾಗುತ್ತಿದೆ.
ಧೂಪ, ಕಿರಾಲುಬೋಗಿ, ಹೊಳೆಮತ್ತಿ, ಹಲಸು, ಹೆಬ್ಬೆಲಸು, ಮಾವು, ಮಹಾಗನಿ, ಹೊಳೆ ದಾಸವಾಳ, ಬಾದಾಮಿ, ನೇರಳೆ, ನೆಲ್ಲಿ, ಸಂಪಿಗೆ, ಹೊನ್ನೆ, ರಾಮಪತ್ರೆ, ಗಾಳಿ, ಸೀತಾಫಲ, ಸಾಗುವಾನಿ, ಮುತ್ತುಗ, ಪುನರ್ಪುಳಿ, ಶ್ರೀಗಂಧ, ರಕ್ತ ಚಂದನ, ರೇಂಜ, ಗುಳಮಾವು, ಬಿಲ್ವಪತ್ರೆ, ಮತ್ತಿ, ಹುಣಸೆ, ಬೀಟೆ, ದಾಲ್ಚಿನಿ ಜಾತಿ ಗಿಡ ದೊರೆಯುತ್ತದೆ.
ಗಿಡ ನೆಟ್ಟು ಬರ ದೂರ ಮಾಡಿಕೊಳ್ಳುಲು ಅರಣ್ಯ ಇಲಾಖೆ ಗಿಡನೆಡಲು ಸಾರ್ವಜನಿಕರಿಗೆ ಸಹಕಾರ ನೀಡಲು ಮುಂದಾಗಿದೆ. ಈಗಾಗಲೇ ಇಲಾಖೆ ಸ್ವಇಚ್ಛೆಯಿಂದ ಗಿಡ ನೆಡುವುದಾದರೆ ನರೇಗಾ ಯೋಜನೆ ಸಹಕಾರ ಪಡೆಯಬಹುದು. ಅದರಲ್ಲೂ ಅರಣ್ಯ ಇಲಾಖೆ ಗಿಡನೆಟ್ಟು ಪೋಷಿಸಿದರೆ ಗಿಡವೊಂದಕ್ಕೆ 120 ರೂ. ಪ್ರೋತ್ಸಾಹಧನ ನೀಡುತ್ತಿದೆ. ಗಿಡನೆಟ್ಟು ಬರ ದೂರ ಮಾಡುವುದೆ ಅರಣ್ಯ ಇಲಾಖೆ ಉದ್ದೇಶವಾಗಿದೆ.
ಮಡಾಮಕ್ಕಿ ಸಸ್ಯ ಕ್ಷೇತ್ರದಲ್ಲಿ 10000 ಗಿಡ ನೆಡಲಾಗುತಿದ್ದು, ಗಿಡನೆಡಲು ಸಂಘ ಸಂಸ್ಥೆಗಳು ವನಮಹೋತ್ಸವ ಮಾದರಿಯಾಗಿ ಸಹಕಾರ ನೀಡಲು ಮುಂದೆ ಬಂದಿದೆ. ಮಡಾಮಕ್ಕಿ ಕುಚ್ಚೂರು ನಾಡ್ಪಾಲು ಸೇರಿದಂತೆ ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ169 ಎ ಇಕ್ಕೆಲಗಳಲ್ಲಿ ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆಗಳು, ಜಿಪಂ ಹಾಗೂ ಪಂಚಾಯಿತಿ ರಸ್ತೆಗಳಲ್ಲಿ ಸರ್ಕಾರಿ ಜಾಗಗಳಲ್ಲಿ ಗಿಡ ನೆಡಲಾಗುವುದು.-ಸಿದ್ದೇಶ್ವರ ಕೆ., ವಲಯ ಅರಣ್ಯಾಧಿಕಾರಿ ಹೆಬ್ರಿ
ಕುಂದಾಪುರ ವಿಭಾಗದ ವತಿಯಿಂದ 3,80,000 ಗಿಡ ಬೆಳೆಸಿ ನಾಟಿಗೆ ಸಿದ್ಧವಾಗಿದೆ. ಕೆಲವೆಡೆ ನಾಟಿ ನಡೆದಿದ್ದು, ಇನ್ನೂ ಕೆಲವೆಡೆ ನಡೆಯುತ್ತಿದೆ. ಉತ್ತಮ ಜಾತಿ ಆದಾಯ ತರುವ ಮರಗಳು, ಹಣ್ಣಿನ ಮರ ಬೆಳೆಸಲಾಗಿದ್ದು ರೈತರು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು.-ಗಣಪತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ