Deep Japan Ultra 100 event : ಸುಮಾರು ಎಂಟು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿದ್ದ ವಿಶ್ವ ವಿಖ್ಯಾತ ಪರ್ವತ ಓಟದ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜಪಾನ್ಯೇತರ ಏಕೈಕ ಸ್ಪರ್ಧಿ ಹಾಗೂ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕರ್ನಾಟಕದ ಅಶ್ವಿನಿ ಗಣಪತಿ ಭಾಜನರಾಗಿದ್ದಾರೆ.
ಸಾಗರ ಮೂಲದ ಅಶ್ವಿನಿ ಪ್ರಸ್ತುತ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಇವರು ಅಲ್ಟ್ರಾ ಮ್ಯಾರಥನ್ ರನ್ನರ್ ಆಗಿದ್ದು, ಜಪಾನ್ನ ಉಯೊನುಮಾದಲ್ಲಿ ಜೂನ್ 27ರಂದು ನಡೆದ 173 ಕಿ.ಮೀ ದೂರ ಹಾಗೂ 9000 ಮೀಟರ್ ಎತ್ತರ ಸೇರಿದಂತೆ ಡೀಪ್ ಜಪಾನ್ ಅಲ್ಟ್ರಾ ಈವೆಂಟ್‌ನಲ್ಲಿ ಭಾಗವಹಿಸಿ, ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಈ ಸಾಧನೆ ಮಾಡಿದ ಜಪಾನ್ಯೇತರ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ.
ತುಂಬಾ ಕಠಿಣವಾದ ಈ ಸ್ಪರ್ಧೆಯಲ್ಲಿ ಶಿಖರದ ದಾರಿಯುದ್ದಕ್ಕೂ ಬಹು ಚೆಕ್‌ಪೋಸ್ಟ್‌ಗಳಲ್ಲಿನ ಕಠಿಣ ಇಂಟರ್ಮೀಡಿಯಟ್ ಕಟ್ಆಫ್ (ಸಾಮಾನ್ಯವಾಗಿ ಪರೀಕ್ಷೆ ಅಥವಾ ಯಾವುದೇ ಪ್ರವೇಶ ಪ್ರಕ್ರಿಯೆಯಲ್ಲಿ ಮುಂದಿನ ಹಂತಕ್ಕೆ ಹೋಗಲು ಅಥವಾ ಅರ್ಹತೆ ಪಡೆಯಲು ಅಗತ್ಯವಿರುವ ಕನಿಷ್ಠ ಅಂಕ ಅಥವಾ ಶೇಕಡಾವಾರು ಅಂಕವನ್ನು ಸೂಚಿಸುತ್ತದೆ) ಗಳಿದ್ದವು. ಈ ಕಡಿದಾದ ಪರ್ವತದಲ್ಲಿ ಕೇವಲ ಓಟದ ಕೌಶಲ್ಯಕ್ಕಿಂತ ತಾಂತ್ರಿಕ ಕೌಶಲ್ಯದ ಅಗತ್ಯವಿತ್ತು. ಇದರಲ್ಲಿ ಭಾಗವಹಿಸುವವರು ಕೇವಲ ಓಟ ಮಾತ್ರವಲ್ಲ, ರಾಪೆಲ್ಲಿಂಗ್/ಹಗ್ಗ ಹತ್ತುವಿಕೆಯ ತಂತ್ರಗಳ ಮೂಲಕ ಸ್ಥಿರ ಸರಪಳಿಗಳು/ಹಗ್ಗಗಳನ್ನು ಬಳಸಿಕೊಂಡು ಕಡಿದಾದ ಆರೋಹಣಗಳು ಮತ್ತು ಇಳಿಜಾರುಗಳನ್ನು ಕ್ರಮಿಸಬೇಕಾಗಿತ್ತು. ಹೀಗಾಗಿ ಈ ಸ್ಪರ್ಧೆ ಅಶ್ವಿನಿ ಅವರಿಗೆ ಹೊಸ ಅನುಭವವಾಗಿತ್ತು ಮತ್ತು ಬೇರೆ ಯಾವುದೇ ಟ್ರಯಲ್ ರನ್‌ಗಳಲ್ಲಿ ಇದನ್ನು ಎಂದಿಗೂ ಮಾಡಿರಲಿಲ್ಲ.
ಒಟ್ಟಾರೆ 46 ಗಂಟೆಗಳ ಕಟ್ಆಫ್, ಉದಾರವಾಗಿ ಕಂಡುಬಂದರೂ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯಗಳನ್ನು ಪರೀಕ್ಷಿಸಲು ಇದು ಸಾಕಾಗಿತ್ತು. ಹೆಚ್ಚುವರಿ ಸವಾಲೆಂದರೆ ತಮ್ಮ ಬ್ಯಾಗ್ನಲ್ಲಿ ಬಹಳಷ್ಟು ಕಡ್ಡಾಯ ವಸ್ತುಗಳನ್ನು ಸಾಗಿಸುವುದು ಅಗತ್ಯವಾಗಿತ್ತು. ಅದು ಕೂಡ ನೀರಿಲ್ಲದೆ ಇತರೆ ವಸ್ತುಗಳೇ 6 ಕೆಜಿಗಿಂತ ಹೆಚ್ಚು ತೂಕವಿತ್ತು. ಜಿಪಿಎಸ್ ಸಾಧನ + ರೆಸ್ಯೂಸ್ ಸಾಧನ (ಎರಡನ್ನೂ ಸಂಘಟಕರು ಹಸ್ತಾಂತರಿಸುತ್ತಾರೆ), ಎಲ್ಲಾ ಸಮಯದಲ್ಲೂ 800 ಕೆ.ಕೆ.ಎಲ್ ಇಂಧನ, ಮಳೆ ಜಾಕೆಟ್, ಮಳೆ ಪ್ಯಾಂಟ್, ತುರ್ತು ಕಂಬಳಿ, ವೈದ್ಯಕೀಯ ಕಿಟ್, ಗಂಟೆ, ಹೆಚ್ಚುವರಿ ಬ್ಯಾಟರಿಗಳೊಂದಿಗೆ 2 ಹೆಡ್ ಟಾರ್ಚ್‌ಗಳು, ಸಾಧನಗಳನ್ನು ಚಾರ್ಜ್ ಮಾಡಲು ಪವರ್‌ಬ್ಯಾಂಕ್‌ಗಳು, ಮೊಬೈಲ್ ಫೋನ್, ಹೆಚ್ಚುವರಿ ಬಟ್ಟೆಯನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಕಡಿದಾದ ಬೆಟ್ಟದಲ್ಲಿ ಸಾಗುವುದು ತುಂಬಾ ಸವಾಲಾಗಿತ್ತು. ಆದರೆ, ಅದೆಲ್ಲವನ್ನೂ ಅಶ್ವಿನಿ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅಂದಹಾಗೆ, ಅಶ್ವಿನಿ ಅವರು ಮಹಿಳೆಯರಲ್ಲಿ 10ನೇ ಸ್ಥಾನ ಪಡೆದು, ಅಗ್ರ 10 ಅಭಿನಂದನಾ ವೇದಿಕೆಯ ಭಾಗವಾಗಿದ್ದರು. ಇದು ಅಶ್ವಿನಿಯವರ 4ನೇ ಅಂತಾರಾಷ್ಟ್ರೀಯ ಈವೆಂಟ್ ಆಗಿದ್ದು, 12 ಗಂಟೆಗಳ ಸ್ಟೇಡಿಯಂ ರನ್ ಮತ್ತು ಬ್ಯಾಕ್‌ಯಾರ್ಡ್ ಅಲ್ಟ್ರಾ ಸ್ವರೂಪದಲ್ಲಿ ಎರಡು ರಾಷ್ಟ್ರೀಯ ಶ್ರೇಷ್ಠ ಸಾಧನೆಗಳನ್ನು ಹೊಂದಿರುವ ಸಾಧನೆ ಮಾಡಿದ ಅಲ್ಟ್ರಾರನ್ನರ್ ಆಗಿದ್ದಾರೆ.
ಅಶ್ವಿನಿ ಅವರು ಎರಡು 24 ಗಂಟೆಗಳ ಸ್ಟೇಡಿಯಂ ರನ್‌ಗಳನ್ನು ಓಡಿದ್ದಾರೆ ಮತ್ತು ಒಂದು ಸಂದರ್ಭದಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಅವರು ಈ ಹಿಂದೆ ಮಲೇಷ್ಯಾ, ಇಂಡೋನೇಷ್ಯಾದಲ್ಲಿ ನಡೆದ 100 ಕಿ.ಮೀ ಟ್ರಯಲ್ ಈವೆಂಟ್‌ನಲ್ಲಿ ಭಾಗವಹಿಸಿದ್ದಾರೆ ಮತ್ತು 2024ರ ಅಕ್ಟೋಬರ್ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 80 ಕಿ.ಮೀ ಏಷ್ಯಾ ಪೆಸಿಫಿಕ್ ಟ್ರಯಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದರು. ಪ್ರಸ್ತುತ ಜಪಾನ್ನಲ್ಲಿ ನಡೆದಿದ್ದು, ಅಶ್ವಿನಿಯವರ ಚೊಚ್ಚಲ ಟ್ರಯಲ್ 100 ಮೈಲುಗಳು ಎಂಬುದು ಗಮನಾರ್ಹ.