

Alia Bhatt : ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ಗೆ ಬರೋಬ್ಬರಿ 77 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಆಕೆಯ ಆಪ್ತ ಸಹಾಯಕಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು 32 ವರ್ಷದ ವೇದಿಕಾ ಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈಕೆ ಆಲಿಯಾ ಭಟ್ ಅವರ ನಿರ್ಮಾಣ ಕಂಪನಿ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅವರ ಆಲಿಯಾ ಭಟ್ ಅವರ ವೈಯಕ್ತಿಕ ಖಾತೆಗಳಲ್ಲಿ ಸುಮಾರು 76.9 ಲಕ್ಷ ರೂಪಾಯಿ ಅಕ್ರಮ ಎಸಗಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಆರೋಪಿ ವೇದಿಕಾ, ಈ ವಂಚನೆಯನ್ನು 2022ರ ಮೇ ತಿಂಗಳಿಂದ 2024ರ ಆಗಸ್ಟ್ ತಿಂಗಳ ನಡುವೆ ಮಾಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಆಲಿಯಾ ಅವರ ತಾಯಿ, ನಟಿ ಹಾಗೂ ನಿರ್ದೇಶಕಿ ಸೋನಿ ರಜ್ದಾನ್ ಕಳೆದ ಜನವರಿ 23ರಂದು ಜುಹು ಪೊಲೀಸರಿಗೆ ವೇದಿಕಾ ವಿರುದ್ಧ ದೂರು ನೀಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿತು. ನಂತರ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ವಂಚನೆಗೆ ಸಂಬಂಧಿಸಿದ ಸೆಕ್ಸನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ವೇದಿಕಾಳ ಹುಡುಕಾಟವನ್ನು ಆರಂಭಿಸಿದರು.
ಪೊಲೀಸ್ ಮೂಲಗಳ ಪ್ರಕಾರ, ವೇದಿಕಾ 2021 ರಿಂದ 2024 ರವರೆಗೆ ಆಲಿಯಾ ಭಟ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡಿದರು. ಈ ಸಮಯದಲ್ಲಿ, ಆಲಿಯಾ ಅವರ ಹಣಕಾಸಿನ ದಾಖಲೆಗಳು ಮತ್ತು ಪಾವತಿಗಳನ್ನು ವೇದಿಕಾರೇ ನಿರ್ವಹಿಸಿದ್ದಾರೆ ಮತ್ತು ಅವರ ವೇಳಾಪಟ್ಟಿಯನ್ನು ಕೂಡ ಆಕೆಯೇ ಯೋಜಿಸಿದ್ದರು ಎಂದು ತಿಳಿದುಬಂದಿದೆ.
ವೇದಿಕಾ, ನಕಲಿ ಬಿಲ್ಗಳನ್ನು ತಯಾರಿಸಿ, ಆಲಿಯಾ ಭಟ್ ಅವರಿಂದ ಸಹಿ ಮಾಡಿಸಿಕೊಂಡು ಹಣವನ್ನು ವಂಚಿಸಿದ್ದಾರೆ. ತನ್ನ ಪ್ರಯಾಣ, ಸಿನಿಮಾ ಮೀಟಿಂಗ್ ಮತ್ತು ಇತರ ಸಂಬಂಧಿತ ವ್ಯವಸ್ಥೆಗಳಿಗೆ ಖರ್ಚು ಮಾಡಲಾಗಿದೆ ಎಂದು ಆಲಿಯಾಗೆ ಹೇಳಿ ಆಕೆಯಿಂದ ಸಹಿಯನ್ನು ಪಡೆದು ವೇದಿಕಾ ವಂಚನೆ ಮಾಡುತ್ತಿದ್ದರು. ನಕಲಿ ಬಿಲ್ಗಳು ನೈಜವಾಗಿ ಕಾಣಿಸಲು ವೇದಿಕಾ, ವೃತ್ತಿಪರ ಸಾಧನಗಳನ್ನು ಬಳಸಿದ್ದಾರೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆಲಿಯಾ ಅವರು ಬಿಲ್ಗಳಿಗೆ ಸಹಿ ಮಾಡಿದ ಬಳಿಕ ಆ ಮೊತ್ತವನ್ನು ವೇದಿಕಾ ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸುತ್ತಿದ್ದಳು. ಬಳಿಕ ಸ್ನೇಹಿತ ಆ ಹಣವನ್ನು ವೇದಿಕಾ ಶೆಟ್ಟಿಗೆ ಹಿಂತಿರುಗಿಸುತ್ತಿದ್ದ ಎಂದು ತಿಳಿದುಬಂದಿದೆ.
ರಜ್ದಾನ್ ಅವರು ಪೊಲೀಸರಿಗೆ ದೂರು ನೀಡಿದ ಬಳಿಕ, ವೇದಿಕಾ ಶೆಟ್ಟಿ ಪರಾರಿಯಾಗಿದ್ದಳು. ಅಂದಿನಿಂದ ತನ್ನ ಸ್ಥಳವನ್ನು ಬದಲಾಯಿಸುತ್ತಲೇ ಇದ್ದಳು. ಆಕೆ ರಾಜಸ್ಥಾನಕ್ಕೆ, ನಂತರ ಕರ್ನಾಟಕ, ನಂತರ ಪುಣೆಗೆ ಮತ್ತು ನಂತರ ಬೆಂಗಳೂರಿಗೆ ತಲುಪಿದ್ದಳು. ಅಂತಿಮವಾಗಿ, ಜುಹು ಪೊಲೀಸರು ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಿದ್ದಾರೆ. ಸದ್ಯ ಆಕೆಯನ್ನು ಮುಂಬೈಗೆ ಕರದೊಯ್ಯಲಾಗಿದೆ. (ಏಜೆನ್ಸೀಸ್)