ಜಿಲ್ಲೆ

ಕಾರವಾರದಲ್ಲಿ ಕೃತಕ ನೆರೆ: ಕ್ರಮ ವಹಿಸಲು ಒತ್ತಾಯ

Uttara Kannada - Subash Hegde



ಕಾರವಾರ:ಶುಕ್ರವಾರದ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ವಿವಿಧೆಡೆ ಕೃತಕ ನೆರೆಯ ಪರಿಸ್ಥಿತಿ ಉಂಟಾಯಿತು. ಕಾರವಾರದ ಬಿಣಗಾದ ಖಾಲಿ ಜಾಗದಲ್ಲಿ, ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ, ಚೆಂಡಿಯಾದಲ್ಲಿ ಗದ್ದೆಗಳಿಗೆ ನೀರು ತುಂಬಿಕೊಂಡಿತ್ತು. ಅರಗಾ ಮಹಾಸತಿ ದೇವಸ್ಥಾನದ ಎದುರಿನ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಯಿತು. ಶುಕ್ರವಾರ ಮಧ್ಯಾಹ್ನದ ನಂತರ ಮಳೆ ಇಳಿಮುಖವಾಗಿದ್ದರಿಂದ ನೆರೆಯ ಆತಂಕ ತಗ್ಗಿದೆ.

ಸೀಬರ್ಡ್ ನೌಕಾ ಯೋಜನೆಯ 2 ನೇ ಹಂತದ ವಿಸ್ತರಣೆ ಕಾಮಗಾರಿಯನ್ನು ಎನ್‌ಸಿಸಿ ಹಾಗೂ ಶಾಪುರ್ಜಿ ಪಾಲನ್ಜಿ ಎಂಬ ಕಂಪನಿಗಳು ಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಹೋಗುವ ಜಾಗದಲ್ಲಿ ಈ ಕಂಪನಿಗಳೂ ತಮ್ಮ ಕಾರ್ಮಿಕರಿಗೆ ಶೆಡ್‌ಗಳನ್ನು ನಿರ್ಮಿಸಿಕೊಟ್ಟಿವೆ. ಇದರಿಂದ ಮಳೆಯ ನೀರು ಹರಿದು ಹೋಗಲು ಜಾಗವಿಲ್ಲದೇಸಮಸ್ಯೆಯಾಗಿದೆ.

ಅಲ್ಲದೇ ನೌಕಾನೆಲೆಯು ತಡೆಗೋಡೆ ಹಾಕಿ ಕಂಪೌಂಡ್ ಒಳಗೆ ನೀರು ಹರಿದು ಹೋಗುವ ನಾಲೆಗಳನ್ನು ಸಣ್ಣದು ಮಾಡಿದ್ದರಿಂದ ಸ್ಥಳೀಯರು ಸಣ್ಣ ಮಳೆಗೂ ಆತಂಕಪಡುವಂತಾಗಿದೆ. ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿಯನ್ನೂ ಐಆರ್‌ಬಿ ಅಸಮರ್ಪಕವಾಗಿ ಕೈಗೊಂಡಿರುವುದು ಸಮಸ್ಯೆಯಾಗಿದೆ ಎಂದು ಕರವೇ ಮುಖಂಡ ದೀಪಕ್ ನಾಯ್ಕ ಆರೊಪಿಸಿದ್ದಾರೆ. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.